ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಂದ ಅಮೆರಿಕೆಯ ಮೇಲೆ ದೊಡ್ಡ ಆರೋಪ
ಇಸ್ಲಾಮಾಬಾದ (ಪಾಕಿಸ್ತಾನ) – ತನ್ನ ರಕ್ಷಣಾ ಉದ್ಯಮವನ್ನು ಮುಂದುವರಿಸಲು ಅಮೆರಿಕವು ಜಗತ್ತಿನೆಲ್ಲೆಡೆ ಯುದ್ಧಗಳನ್ನು ಪ್ರಚೋದಿಸುತ್ತದೆ ನಂತರ ಅಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತದೆ.
ಯುದ್ಧದ ಸಮಯದಲ್ಲಿ ಅಮೆರಿಕವು ಎರಡೂ ಕಡೆಯಿಂದಲೂ ಪಾತ್ರ ನಿರ್ವಹಿಸುತ್ತದೆ ಮತ್ತು ಈ ಮೂಲಕ ಅದು ಜಾಗತಿಕ ಅಸ್ಥಿರತೆಯ ಜೊತೆಗೆ ತನ್ನ ಸ್ಥಾಪಿತ ರಕ್ಷಣಾ ಉದ್ಯಮವನ್ನು ಪೋಷಿಸುತ್ತದೆ, ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಆರೋಪಿಸಿರುವ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಹೇಳಿಕೆಯನ್ನು ಅವರು ಎಲ್ಲಿ ಮತ್ತು ಯಾವಾಗ ನೀಡಿದ್ದಾರೆ ಎಂಬುದು ತಿಳಿದುಬಂದಿಲ್ಲ. ಈ ಹಿಂದೆ ಖ್ವಾಜಾ ಆಸಿಫ್ ಅವರು, ಪಾಕಿಸ್ತಾನವು ಕಳೆದ 30 ವರ್ಷಗಳಿಂದ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳಿಗಾಗಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದ್ದರು.
ಖ್ವಾಜಾ ಆಸಿಫ್ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ
1. ಜಗತ್ತಿನ ಎಲ್ಲೆಡೆ ಅಮೆರಿಕನ್ನರು ಯುದ್ಧಗಳನ್ನು ಮಾಡುತ್ತಿದ್ದಾರೆ. ಬಹುಶಃ ಕಳೆದ 100 ವರ್ಷಗಳಿಂದ. ಅದು 260 ಯುದ್ಧಗಳನ್ನು ಮಾಡಿದೆ, ಆದರೆ ಚೀನಾ 3 ಯುದ್ಧಗಳನ್ನು ಮಾಡಿದೆ. ಅವರು (ಅಮೆರಿಕ) ಇನ್ನೂ ಹಣ ಗಳಿಸುತ್ತಿದ್ದಾರೆ.
2. ಮಿಲಿಟರಿ ಉದ್ಯಮವು ಅವರ ಒಟ್ಟು ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ದೊಡ್ಡ ಭಾಗವಾಗಿದೆ. ಆದ್ದರಿಂದ ಅವರು ಯುದ್ಧಗಳಲ್ಲಿ ಭಾಗವಹಿಸಬೇಕಾಗುತ್ತದೆ. ಅವರು ದೇಶಗಳನ್ನು ಯುದ್ಧ ಮಾಡಲು ಪ್ರಚೋದಿಸುತ್ತಾರೆ. ಒಮ್ಮೊಮ್ಮೆ ಇಲ್ಲಿ, ಒಮ್ಮೊಮ್ಮೆ ಅಲ್ಲಿ. ದೇಶಗಳು ಯುದ್ಧ ಮಾಡಿದಾಗ, ಅಮೆರಿಕ ಹಣ ಗಳಿಸುತ್ತದೆ.
3. ಅಮೆರಿಕವು ಪ್ಯಾಲೆಸ್ಟೈನ್, ಸಿರಿಯಾ, ಈಜಿಪ್ಟ್ ಮತ್ತು ಲಿಬಿಯಾಗಳಲ್ಲಿ ಈ ರೀತಿ ಮಾಡಿದೆ. ಇವು ಶ್ರೀಮಂತ ದೇಶಗಳಾಗಿದ್ದವು, ಆದರೆ ಈಗ ಯುದ್ಧದಿಂದಾಗಿ ದಿವಾಳಿಯಾಗಿವೆ ಮತ್ತು ಅಮೆರಿಕ ಹಣ ಗಳಿಸಿದೆ.
