1. ಮೌಲ್ಯ-ಅಪಮೌಲ್ಯ.!
ಇಲ್ಲಿ ಸಾಧನೆಗಳ ಸಾಕ್ಷೀಕರಿಸಿದರೆ
ಆಗುತ್ತೀರಿ ಮಂದಿಗೆ ಸ್ಪೂರ್ತಿಸೆಲೆ
ಬರೀ ವೇದನೆಗಳನೆ ಘನೀಕರಿಸಿದರೆ
ಕಳೆದುಕೊಳ್ಳುತ್ತೀರಿ ನಿಮ್ಮಯ ಬೆಲೆ.!
******
2. ಗೀಳು..!
ಕೆಲವರಿಗಿಲ್ಲಿ ನಿತ್ಯವೂ ಗೋಳನ್ನೇ
ಹೇಳಿಕೊಂಡು ಅಳುವ ಬಾಳು..
ಅದರಲ್ಲೂ ಲೈಕು ಕಾಮೆಂಟುಗಳ
ಗಿಟ್ಟಿಸಿಕೊಳ್ಳುವಂತ ವಿಚಿತ್ರ ಗೀಳು.!
********
3. ಮರೀಚಿಕೆ.!
ವರ್ಷಗಟ್ಟಲೆ ಕಂಡ ಅಕ್ಕಪಕ್ಕದವರೇ
ಕಷ್ಟವೆಂದಾಗ ಬಿಚ್ಚುವುದಿಲ್ಲ ಕಾಸು
ಕಾಣದ ಕಂಡರಿಯದವರು ಆಗುವರೇ
ನೆರವು ನೆರಳಿಡುವ ಆಸರೆಯ ಹಾಸು.!
*******
4. ಉದ್ದೇಶ.!
ಗೆಳೆಯಾ ಈ ಮುಖಪುಸ್ತಕವಿರುವುದು
ನಿನ್ನ ಕಣ್ಣೀರು ಕೋಟಲೆ ಬಿಚ್ಚಿಡಲಿಕ್ಕಲ್ಲ
ಕಲೆ ಕೌಶಲ್ಯಗಳ ಪರಸ್ಪರ ಮೆಚ್ಚಿಕೊಳ್ಳಲಿಕ್ಕೆ
ಸಾಹಿತ್ಯ ಸಂವೇದನೆಗಳ ಹಂಚಿಕೊಳ್ಳಲಿಕ್ಕೆ.!
*********
5. ವ್ಯರ್ಥ.!
ಸುಮ್ಮನೇಕೆ ಬಿಕ್ಕಿ ಬೋರಾಡಿ
ಅನುಕಂಪ ಪಡೆವ ಛಾಳಿ..
ಇಲ್ಲಿದೆ ಬೂಟಾಟಿಕೆ ಕಳಕಳಿ
ಮಂದಿ ಮರೆಯುತ್ತಾರೆ ಕೇಳಿ
*******
6. (ನಿ)ವೇದನೆ.!
ಅಕ್ಷರಬಂಧ ಭಾವಬಂಧದ ದಾರದಿ
ಹೊಸೆಯಬೇಡಿ ವ್ಯಾಪಾರ ವ್ಯವಹಾರ
ಜನರೆದೆಯ ಅಕ್ಕರೆ ಅಂತಃಕರಣ ಆದರ
ನಗದಾಗಿಸಲು ಮಾಡಬೇಡಿ ಹುನ್ನಾರ.!
*******
7. ಕಟುವಾಸ್ತವ.!
ಗೆಳತಿ ಇಲ್ಲಿ ಕಾಣುವ ತಾಪ ಪ್ರತಾಪ
ಸಂತಾಪ ಸಾಂತ್ವಾನಗಳೆಲ್ಲವು ಕ್ಷಣಿಕ
ಮರುಗಿದಂತಾಡಿ ಮರೆವವರೇ ಅಧಿಕ
ಅಂತರ್ಜಾಲ ಅಕ್ಷರಶಃ ಭ್ರಮಾಲೋಕ.!
*********
8. ಜೋಕೆ.!
ಈ ಮುಖಪುಸ್ತಕದಿ ಪುಟಪುಟದಿ
ನಿಮ್ಮ ಗೋಳನ್ನೇ ಬರೆಯಬೇಡಿ
ಒಣ ಸಾಂತ್ವಾನಕಾಗಿ ಅಕ್ಷರಕ್ಷರದಿ
ನಿಮ್ಮ ಬದುಕನ್ನೇ ತೆರೆದಿಡಬೇಡಿ.!
*******
9. ಕಹಿಸತ್ಯ.!
ಕೇವಲ ನಿಂದನೆ ವೇದನೆ ನಿವೇದನೆಗಳಿಂದ
ಯಾರ್ಯಾರೂ ಇಲ್ಲಿ ಬೆಳೆದ ನಿದರ್ಶನಗಳಿಲ್ಲ
ನಿರತ ಆರಾಧನೆ ಸತತ ಸಾಧನೆಗಳಿಂದಷ್ಟೇ
ಬೆಳೆದು ಆದರ್ಶವಾಗಿಹರು ಜನಗಳಿಗೆಲ್ಲ.!
******
10. ನಗೆಪಾಟಲು.!
ವೃಥಾ ಸದ್ದು ಮಾಡಲಿಕ್ಕೆ ಚೀರಾಡಬೇಡಿ
ಸುಮ್ಮನೆ ಸುದ್ದಿಯಾಗಲಿಕ್ಕೆ ಗೋಳಾಡಬೇಡಿ
ಕಡೆಗೆ ಅವರಿವರ ಬಾಯಿಗೆ ಲದ್ದಿಯಾಗಬೇಡಿ
ಮಂದಿ ಮರುಗಿದಂತೆ ಮಾಡುವರು ಮುಂದೆ
ಬಿದ್ದುಬಿದ್ದು ಆಡಿಕೊಳ್ಳುವರು ಬೆನ್ನಹಿಂದೆ.!
- ಎ.ಎನ್.ರಮೇಶ್.ಗುಬ್ಬಿ.
