ಯುದ್ಧ ಎಂಬುದು ಕೇವಲ ಗಡಿಯ ಮುಂದೆ ನಡೆಯುವ ಗುಂಡಿನ ಸದ್ದು, ವಿಮಾನಗಳ ದಾಳಿ, ಅಥವಾ ಶಕ್ತಿಯ ಪ್ರದರ್ಶನವಲ್ಲ – ಅದು ಮಾನವ ಹೃದಯಗಳಲ್ಲೂ ಸಂಭವಿಸುವ ಆಂತರಿಕ ಕಲಹ.
ಪಹಲ್ಗಾಮ ದುರಂತದ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ಪರಿಸ್ಥಿತಿ, ದೇಶದ ಜನತೆಯಲ್ಲಿ ಆಕ್ರೋಶ, ಕೋಪ, ಹಾಗೂ ಆತಂಕಕ್ಕೆ ತಳ್ಳಿತ್ತಾದರೂ, ಕದನ ವಿರಾಮ ಫೋಷಣೆಯ ನಂತರ ಎಲ್ಲರಲ್ಲೂ ಅಸಮಾಧಾನದ ಜತೆಗೆ ನೆಮ್ಮದಿಯೂ ಮನೆ ಮಾಡಿದೆ.
ಯುದ್ದದ ಪರಿಣಾಮ ದೇಶದಲ್ಲೇಲ್ಲಾ ಬೀರಿದರೂ, ಅದು ಹೆಚ್ಚು ಪರಿಣಾಮ ಬೀರುವುದು ದೇಶದ ಗಡಿಭಾಗಗಳಲ್ಲಿ. ಇಂಥ ಯುದ್ದಗಳು ಭಯೋತ್ಪದನೆಯಿಂದ ಜನರ ಜೀವಿತವನ್ನೇ ಕದಡಿದಿದೆ ಭಯ, ನೋವು, ಹಿಂಸೆ ಹಾಗೂ ಅನಿರೀಕ್ಷಿತಾ ಪರಿಸ್ಥಿತಿ ಗಳ ನಡುವೆ ಕಣಿವೆಯ ಜನರು ಬದುಕು ಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ. ಶಬ್ದದ ನಡುವೆ ಮೌನ ಎದ್ದು ಕಾಣುವ ಈ ಭೂಭಾಗದಲ್ಲಿ, ಯುದ್ಧವು ಶಕ್ತಿಯ ಪ್ರದರ್ಶನವಾಗಬಹುದು ಆದರೆ ಅದರ ಪರಿಣಾಮಗಳು ಸಾಮಾನ್ಯ ಪ್ರಜೆಗಳ ಬದುಕಿಗೆ ಅಣಕ ಆಗುತ್ತವೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ಮುಗಿದು ಅದರ ಕಾರ್ಮೋಡ ದೇಶದೆಲ್ಲೆಡೆ ಆವರಿಸಿದೆ. ಎರಡು ದೇಶದ ಸೇನೆಗಳು ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿದ್ದು, ಸುಮ್ಮನಿದ್ದ ಭಾರತವನ್ನು ವಿನಾಕಾರಣ ಕೆಣಕಿದ ಪಾಕಿಸ್ತಾನಕ್ಕೆ ಪ್ರತಿಕಾರದ ದೊಡ್ಡ ಹೊಡೆತವನ್ನು ನೀಡಿದೆ ಹಾಗೂ ಅದಕ್ಕೆ ದೇಶದ ಎಲ್ಲ ವರ್ಗದ ಜನರ ಒಮ್ಮತದ ಸಮ್ಮತಿಯು ಇತ್ತು ಎನ್ನಬಹುದು.
ಆದರೆ ಈ ಎಲ್ಲ ಬೆಳವಣಿಗೆಯ ನಡುವೆ ನನ್ನ ಕಣ್ಣು ನೋಡಿದ್ದು ಹಾಗೂ ಹೃದಯ ಆಲಿಸಬಯಸಿದ್ದು, ಸದಾ ಭಯವನ್ನೇ ಉಂಡು ಭೀತಿಯನ್ನೇ ಹೊದ್ದು ಕೊಂಡು ಮಲಗಿರುವ ಕಾಶ್ಮೀರದ ಕಣಿವೆಯ ಜನರೆಡೆಗೆ. ಸದ್ಯ ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದರೆ, ಕಾಶ್ಮೀರ ಕಣಿವೆಯಲ್ಲಿ ವಿಚಿತ್ರವಾದ ಉಸಿರುಗಟ್ಟಿಸುವಂತಹ ಮೌನವಿದೆ.

ಈ ಮೌನವು ಶಾಂತಿಯ ಕಾರಣದಿಂದಾಗಿ ಸೃಷ್ಟಿಯಾಗಿದ್ದಲ್ಲ ಬದಲಾಗಿ ಭಯದ ಕಾರಣದಿಂದ ಹುಟ್ಟಿರುವುದು. ರಸ್ತೆ ಬದಿಗಳಲ್ಲಿ, ಮಾರುಕಟ್ಟೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ನೀರಾಳ ಮೌನ ಆವರಿಸಿದೆ. ಅನಿಶ್ಚಿತತೆಯ ಭಯದಲ್ಲಿ ಓಡಾಡುತ್ತಿರುವ ಜನ, ಟಿ ವಿ ಮಾಧ್ಯಮಗಳಲ್ಲಿ ಪ್ರಸಾರವಾಗುವ ಯುದ್ಧ ಸಂಗತಿಯ ಬೆಳವಣಿಗೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ ಹೊರತು, ನಮ್ಮದೇ ದೇಶದ ಗಡಿಯಲ್ಲಿನ ಜನರ ಬದುಕಿನ ಬವಣೆಯ ಬಗ್ಗೆ ಯಾರ ಗಮನವೂ ಇಲ್ಲ.
ಬಾಂಬ್ ಗಳು ದೆಹಲಿ ಹಾಗೂ ಇಸ್ಲಾಮಾಬಾದ್ ಮೇಲೆ ಬೀಳುವುದಿಲ್ಲ. ಅವುಗಳು ಬೀಳುವುದು ಕಾಶ್ಮೀರ ಕಣಿವೆಯ ಮನೆ ಬಾಗಿಲಿನಲ್ಲಿ. ತನ್ನ ಕೈಯಲ್ಲಿರದ ಹುಟ್ಟು ತನ್ನನ್ನು ಎಂಥಹ ಸ್ಥಳದಲ್ಲಿ ಜನ್ಮ ತಾಳುವಂತೆ ಮಾಡಿದೆ, ಎನ್ನುವ ಉತ್ತರವೇ ಇಲ್ಲದ ಪ್ರಶ್ನೆಯೊಳಗೆ ಬದುಕುತ್ತಿರುವ ಆ ಮಕ್ಕಳು ಯಾವ ತಪ್ಪುಗೆ ಈ ಶಿಕ್ಷೆಗೆ ಒಳಗಾಗುತ್ತಿದ್ದಾರೆ.
ಈ ಕದನದ ಕಾರ್ಮೋಡ , ರಾತ್ರಿಯ ಆಗಸದಲ್ಲಿ ಸದ್ದು ಮಾಡುವ ವೈಮಾನಿಕ ದಾಳಿ, ಕೊನೆಯೇ ಇಲ್ಲದ ಕರ್ಫ್ಯೂ, ಮನೆಯ ಹಿಂದೆ ನಿರ್ಮಿಸುವ ಬಂಕರ್ ಗಳು ಪರ್ವತ ಗಳಿಂದ ಕೇಳಿಸುವ ಸೈರಾನ್ ಶಬ್ದ. ಸುರಕ್ಷತೆಯ ಖಾತರಿ ಇಲ್ಲದೇ, ಗಡಿ ಪ್ರದೇಶಗಳಲ್ಲಿನ ಶಾಲೆಗಳು ಬಂದ್ ಮಾಡಲಾಗಿದೆ . ಈ ಎಲ್ಲ ವಿಷಯಗಳು ನಾಳೆ ಎನ್ನುವ ಕನಸನ್ನು ತಿಂದು ಮುಗಿಸುತ್ತಿವೆಯಲ್ಲವೇ….?ತಾವು ಆರಂಭಿಸಿರದ ತಮ್ಮಿಂದ ನಿಲ್ಲಿಸಲು ಸಾಧ್ಯವೇ ಇರದ ಕದನದಲ್ಲಿ ದಿನ ಕಳೆಯುವಂತೆಯಾಗಿ ಹೋಗಿದೆ.
ಜನರ ಇಚ್ಛೆಗಳು ಅಭಿಪ್ರಾಯಗಳು ತನ್ನದೇ ಆದ ಹಿಂದಿನ ನೆನಪುಗಳನ್ನು ಆಧರಿಸಿರುತ್ತವೆ. ಯಾವುದೇ ದೇಶದ ಜೊತೆ ಗಡಿಯನ್ನು ಹಂಚಿಕೊಳ್ಳದಿರುವ ರಾಜ್ಯದ ಜನರ ಅಭಿಪ್ರಾಯಗಳೇ ಬೇರೆಯಾಗಿರುತ್ತವೆ. ಅಂದರೆ ಯುದ್ಧ ಹಾಗೂ ಭದ್ರತೆಯ ವಿಷಯಗಳನ್ನು ಕೇಳಿ ತಿಳಿದುಕೊಳ್ಳುವ ನಮ್ಮ ಅಭಿಪ್ರಾಯಕ್ಕೂ, ಅದರಿಂದ ನೇರ ಪರಿಣಾಮಕ್ಕೆ ಒಳಗಾಗಿರುವ ಗಡಿಯಂಚಿನ ರಾಜ್ಯದ ಜನರ ಅನಿಸಿಕೆಗಳಿಗೂ ತುಂಬಾ ವಿರುದ್ಧ ಬಯಕೆಗಳಿರುವುದಂತೂ ಸತ್ಯ.ಅಂದರೆ, “ಬದುಕಿನ ಬವಣೆಯು ಅದನ್ನು ನೋಡಿ ತಿಳಿದುಕೊಳ್ಳುವವರ ಹಾಗೂ ಅದನ್ನು ಅನುಭವಿಸಿ ಪಡೆದುಕೊಳ್ಳುವವರ ನಡುವಿನ ವ್ಯತ್ಯಾಸಗಳಲ್ಲಿ ಅಡಗಿದೆ ” ಎಂಬುದು.
ಯುದ್ಧದ ತಾತ್ವಿಕ ಚರ್ಚೆಗಳು, ರಾಜಕೀಯ ಇಚ್ಛೆಗಳು, ಮತ್ತು ಸೇನೆಯ ತಂತ್ರಗಳು ಯಾವತ್ತೂ ಟಿವಿ ಚರ್ಚೆಗಳ ಮಟ್ಟದಲ್ಲಿ ಉಳಿಯುತ್ತವೆ. ಆದರೆ, ಗಡಿಯಾಚೆ ಇದ್ದ ಜೀವನಗಳು – ತಮ್ಮ ದಿನ ನಿತ್ಯದ ಶಾಂತಿಯನ್ನು, ಭದ್ರತೆಯನ್ನು, ಮಕ್ಕಳು ಹೋಗುವ ಶಾಲೆಯ ಮುಂಗಟ್ಟುಗಳನ್ನು, ರಾತ್ರಿ ನಿದ್ರೆ ಮಾಡುವ ಮನೆ, ಪಕ್ಕದ ಬಂಕರ್ಗಳನ್ನು – ಎಲ್ಲವನ್ನೂ ಕಳೆದುಕೊಳ್ಳುತ್ತವೆ.
ರಾಜಕೀಯ ನಿರ್ಣಯಗಳು ಯಾವಾಗಲು ತನ್ನ ಪ್ರಜೆಗಳ ಹಿತ ಕಾಯುವಂತಿರಬೇಕು. ಶಾಂತಿ ಎಂಬುದು ಕೇವಲ ರಾಜಕೀಯ ಮಾತುಕತೆಗಳಲ್ಲಿ ಕಟ್ಟಿ ಹಾಕಬೇಕಾದ ಮಾತಲ್ಲ – ಅದು ಪ್ರತಿಯೊಬ್ಬ ಪ್ರಜೆ ಬದುಕುವ ಹಕ್ಕಿನೊಳಗೂ ಇದೆ.
ಶಕ್ತಿಯ ಪ್ರದರ್ಶನದಲ್ಲಿ ಮಗ್ನರಾಗುವ ನಾವುಗಳು, ಈ ಶಬ್ದವಿಲ್ಲದ ಕರಾಳ ನಿಶಬ್ಧವನ್ನು ಆಲಿಸಬೇಕಾಗಿದೆ. ಯುದ್ಧವನ್ನು ಬರೆಯುವ ಇತಿಹಾಸಕ್ಕಿಂತ ಅದರಿಂದ ಹುಟ್ಟುವ ದುಃಖದ ಕಥೆಗಳನ್ನು ಓದಬೇಕಾಗಿದೆ. ಏಕೆಂದರೆ, ನಿಜವಾದ ದೇಶಪ್ರೇಮವೆಂದರೆ ಗಡಿಯೊಂದರ ಮೇಲೆ ಕತ್ತಿ ಹಿಡಿಯುವುದರ ಜೊತೆಗೆ – ಗಡಿಯ ಹಿಂದಿರುವ ಜೀವದ ಮೇಲೆ ಕಣ್ಣು ಹರಿಸುವುದು. ಅಲ್ಲವೇ…..

– ಕೀರ್ತಿ ಎಂ.
