ಭಾರತೀಯ ಸಂಜಾತ ಅಮೆರಿಕದ ಸೈಬರ್ ಮುಖ್ಯಸ್ಥರಿಂದ ಪ್ರಮಾದ; ChatGPTಗೆ ಸೂಕ್ಷ್ಮ ಮಾಹಿತಿ ಅಪ್ಲೋಡ್
ವಾಷಿಂಗ್ಟನ್: ಅಮೆರಿಕದ ಸೈಬರ್ ಭದ್ರತೆ ಮತ್ತು ಮೂಲಸೌಕರ್ಯ ಭದ್ರತಾ ಏಜೆನ್ಸಿ (CISA)ಯ ಹಾಲಿ ಮುಖ್ಯಸ್ಥರಾಗಿರುವ ಭಾರತೀಯ ಸಂಜಾತ ಮಧು ಗೊಟ್ಟುಮುಕ್ಕಲ ಅವರು ತಮ್ಮ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಎಐ ವೇದಿಕೆಯಾದ ChatGPTಗೆ ಅಪ್ಲೋಡ್ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಅಮೆರಿಕದ ಭದ್ರತಾ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕದ ಪ್ರತಿಷ್ಠಿತ ಮಾಧ್ಯಮ ಪೊಲಿಟಿಕೊ ವರದಿ ಪ್ರಕಾರ, ಕಳೆದ ಬೇಸಿಗೆಯಲ್ಲಿ ಮಧು ಗೊಟ್ಟುಮುಕ್ಕಲ ಅವರು ಕಾಂಟ್ರಾಕ್ಟಿಂಗ್ ಹಾಗೂ ಸೈಬರ್ ಭದ್ರತೆಗೆ ಸಂಬಂಧಿಸಿದ ಕೆಲವು ಮಾಹಿತಿಯನ್ನು ChatGPTಗೆ ಅಪ್ಲೋಡ್ ಮಾಡಿದ್ದರು. ಈ ಮಾಹಿತಿ ಅಪ್ಲೋಡ್ ಆಗುತ್ತಿದ್ದಂತೆಯೇ ಸ್ವಯಂಚಾಲಿತ ಭದ್ರತಾ ಎಚ್ಚರಿಕೆ ವ್ಯವಸ್ಥೆ ಸಕ್ರಿಯಗೊಂಡಿದ್ದು, ವಿಷಯದ ಕುರಿತು ಆಂತರಿಕ ತನಿಖೆಯೂ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಅಪ್ಲೋಡ್ ಮಾಡಲಾದ ದಾಖಲೆಗಳನ್ನು ‘ಗೌಪ್ಯ’ ಎಂದು ವರ್ಗೀಕರಿಸಿರಲಿಲ್ಲ. ಆದರೆ ಅವುಗಳಿಗೆ “ಕಚೇರಿ ಬಳಕೆಗೆ ಮಾತ್ರ” ಎಂಬ ಸೂಚನೆ ನೀಡಲಾಗಿದ್ದು, ಸಾರ್ವಜನಿಕವಾಗಿ ಹಂಚಿಕೊಳ್ಳಲು ಅವಕಾಶವಿರಲಿಲ್ಲ. ಇಂತಹ ಮಾಹಿತಿಯನ್ನು ಬಹಿರಂಗ ವೇದಿಕೆಗಳಿಗೆ ಅಪ್ಲೋಡ್ ಮಾಡಿದಾಗ ತಕ್ಷಣ ಭದ್ರತಾ ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಅಮೆರಿಕ ಸರ್ಕಾರ ಜಾರಿಗೊಳಿಸಿದೆ ಎಂದು ವರದಿ ತಿಳಿಸಿದೆ.
ಮಧು ಗೊಟ್ಟುಮುಕ್ಕಲ ಯಾರು?
ಮಧು ಗೊಟ್ಟುಮುಕ್ಕಲ ಅವರು ಭಾರತೀಯ ಸಂಜಾತರಾಗಿದ್ದು, ಅಮೆರಿಕದ ಫೆಡರಲ್ ನೆಟ್ವರ್ಕ್ಗಳನ್ನು ಅತ್ಯಾಧುನಿಕ ಸೈಬರ್ ದಾಳಿಗಳಿಂದ ರಕ್ಷಿಸುವ ಪ್ರಮುಖ ಜವಾಬ್ದಾರಿಯನ್ನು ಹೊಂದಿದ್ದಾರೆ. ರಷ್ಯಾ, ಚೀನಾ ಸೇರಿದಂತೆ ರಾಷ್ಟ್ರ ಬೆಂಬಲಿತ ಸೈಬರ್ ಬೆದರಿಕೆಗಳನ್ನು ತಡೆಯುವ ಕಾರ್ಯವೂ ಅವರ ವ್ಯಾಪ್ತಿಗೆ ಬರುತ್ತದೆ.
ಅವರು ಡಕೋಟಾ ವಿಶ್ವವಿದ್ಯಾಲಯದಿಂದ ಇನ್ಫಾರ್ಮೇಶನ್ ಸಿಸ್ಟಮ್ಸ್ನಲ್ಲಿ ಪಿಎಚ್ಡಿ ಪದವಿ ಪಡೆದಿದ್ದು, ಡಲ್ಲಾಸ್ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ನಿರ್ವಹಣೆಯಲ್ಲಿ ಎಂಬಿಎ ಮಾಡಿದ್ದಾರೆ. ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಎಸ್ ಹಾಗೂ ಆಂಧ್ರ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ನಲ್ಲಿ ಬಿಇ ಪದವಿಯನ್ನು ಪಡೆದಿದ್ದಾರೆ.
ತನಿಖೆ ಮುಂದುವರಿಕೆ
ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಆಗಸ್ಟ್ನಲ್ಲಿ ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಸರ್ಕಾರಿ ವ್ಯವಸ್ಥೆ ಅಥವಾ ಮೂಲಸೌಕರ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಬಹಿರಂಗವಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸಿದೆ. ಆದರೆ ತನಿಖೆಯ ಅಂತಿಮ ವರದಿಯನ್ನು ಇನ್ನೂ ಸಾರ್ವಜನಿಕಗೊಳಿಸಲಾಗಿಲ್ಲ.
ChatGPT ಬಳಕೆಗೆ ಅನುಮತಿ
ಸಾಮಾನ್ಯವಾಗಿ ಹೆಚ್ಚಿನ DHS ಅಧಿಕಾರಿಗಳಿಗೆ ChatGPT ಬಳಸಲು ಅವಕಾಶವಿಲ್ಲ. ಆದರೆ ಮಧು ಗೊಟ್ಟುಮುಕ್ಕಲ ಅವರಿಗೆ ಅಧಿಕೃತವಾಗಿ ಸೀಮಿತ ಅವಧಿಗೆ ಬಳಸಲು ಅನುಮತಿ ನೀಡಲಾಗಿತ್ತು ಎಂದು CISA ಸ್ಪಷ್ಟಪಡಿಸಿದೆ. “ಅವರು ಕೊನೆಯ ಬಾರಿ 2025ರ ಜುಲೈ ಮಧ್ಯಭಾಗದಲ್ಲಿ ChatGPT ಬಳಸಿದ್ದಾರೆ. ಬಳಕೆ ಮಿತಿಯೊಳಗೇ ಇತ್ತು” ಎಂದು CISA ವಕ್ತಾರರು ತಿಳಿಸಿದ್ದಾರೆ.
ಈ ಘಟನೆ ಕೃತಕ ಬುದ್ಧಿಮತ್ತೆ ಬಳಕೆ ಮತ್ತು ರಾಷ್ಟ್ರೀಯ ಭದ್ರತೆ ಕುರಿತ ಚರ್ಚೆಗೆ ಮತ್ತೊಮ್ಮೆ ದಾರಿ ಮಾಡಿಕೊಟ್ಟಿದೆ.
