
ದೇಶದಲ್ಲೇ ಮೊದಲ ಬಾರಿಗೆ ಅಪರಾಧ ಪ್ರಕರಣಗಳ ತನಿಖೆಯ ಸುಧಾರಣೆಗೆ ಸ್ಥಳಾಧಿಕಾರಿ (ಕ್ರೈಂ ಸೀನ್ ಆಫೀಸರ್)ಯ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಪೊಲೀಸ್ ಇಲಾಖೆಗೆ ಹೊಸ ಜೀವಕಳೆ ಬರಲಿದೆ.
ಠಾಣೆಗೊಬ್ಬ ಸೀನ್ ಆಫ್ ಕ್ರೈಂ ಅಧಿಕಾರಿಯನ್ನು ನೇಮಕ ಮಾಡುವ ಪ್ರಸ್ತಾಪ ಇದ್ದು, ಈ ಬಗ್ಗೆ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ (ಫಾರೆನ್ಸಿಕ್ ಲ್ಯಾಬ್) ಅಧಿಕಾರಿಗಳು ಈ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇದೇ ವೇಳೆ, ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಈಗ ಇರುವ ಬೆರಳಚ್ಚು ಘಟಕವನ್ನು ಈ ಹೊಸ ನೇಮಕಾತಿಯೊಂದಿಗೆ ವಿಲೀನಗೊಳಿಸುವ ಕುರಿತೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ಚಿಂತನೆ ನಡೆಸಿದೆ.
ಬೆರಳಚ್ಚು ಘಟಕದಲ್ಲಿ ಪಿಎಸ್ಐ ಸೇರಿದಂತೆ ಒಟ್ಟು 210 ಮಂಜೂರಾದ ಹುದ್ದೆಗಳಿವೆ. ಈ ಪೈಕಿ 116 ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಒಟ್ಟು ವಿಭಾಗವನ್ನು ನೂತನ ಘಟಕಕ್ಕೆ ವಿಲೀನಗೊಳಿಸಿದರೆ ಕ್ರೈಂ ಸೀನ್ ಆಫೀಸರ್ ತಂಡ ಮತ್ತಷ್ಟು ಬಲವರ್ಧನೆಯಾಗಲಿದೆ ಎನ್ನಲಾಗಿದೆ.