ಬಿತ್ತಿ ವಾರೊಪ್ಪತ್ತಿಗೆ
ಹೊಲದ ತುಂಬಾ ಪೈರಿನ ಸಾಲು;
ಭೂತಾಯೀ ಕೊರಳಿಗೆ
ಒಪ್ಪವಾಯಿತೀ ಹಸಿರು ಶಾಲು!
ಏನು ಚೆಂದ ಈ ಸಂಜೆ
ಹಾಡತಾವ ಗಿಳಿ, ಕೋಗಿಲೇ
ಭೂತಾಯೀ ಅಲ್ಲ ಬಂಜೆ;
ನಕ್ಕು ನಮ್ಮ ಸಲುಹುತಾಳೇ!
ಈ ಬಿಸಿಲು ಎಷ್ಟು ಚೆಂದ
ಎಲ್ಲಿ ಹೋದವೋ ಆ ಮೋಡ
ಬಯಲಾದ ಬಾನಿನಿಂದ_
ಹೀಗೆ ಬೆಳಗಬಹುದೇ? ಆಷಾಢ!
ಕಳೆದು ಹೋಗೋ ಈ ದಿನಗಳೇ ಖರೇ ಸನಾತನ!
ಬಿಚ್ಚೊಗೆ, ತೊಡು ಹೊಸಬಟ್ಟೆ; ಅದೇ ಹೊಸತನ!
– ಚಂಸು
