ಪ್ರೇಮ ಎಂದಾಕ್ಷಣ ನಮ್ಮ ತಲೆಯಲ್ಲಿ ಗಂಡು – ಹೆಣ್ಣಿನ ಪ್ರೇಮˌ ಅನೇಕ ಸಿನೆಮಾ ಪ್ರೇಮ ಕಹಾನಿಗಳುˌ ಕಥೆˌ ಕಾದಂಬರಿˌ ಕವಿತೆಗಳು ತಲೆಯಲ್ಲಿ ಒಡತೊಡುಗುತ್ತವೆ. …
ಒಮ್ಮೆ ನಿಶ್ಶಬ್ದವಾಗಿ ಕುಳಿತುಕೊಳ್ಳಿ. ಯಾವುದೇ ಗುರಿಯಿಲ್ಲದೆ… ಯಾವುದನ್ನೂ ಸಾಧಿಸಬೇಕೆಂಬ ಒತ್ತಡವಿಲ್ಲದೆ… ಬದುಕನ್ನು ನೋಡಿ.
ಅಲ್ಲಿ ಒಂದು ಪ್ರಶ್ನೆ ನಿಧಾನವಾಗಿ ಮೂಡುತ್ತದೆ —
“ನಾವು ಏಕೆ ಇಷ್ಟು ಓಡುತ್ತಿದ್ದೇವೆ?”
ಹಣಕ್ಕಾಗಿ, ಸ್ಥಾನಕ್ಕಾಗಿ, ಸಂಬಂಧಗಳಿಗಾಗಿ, ಭದ್ರತೆಗಾಗಿ…
ಆದರೆ ಈ ಓಟದ ಕೊನೆಯಲ್ಲಿ ಏನು ಸಿಗುತ್ತದೆ?
ಶಾಂತಿ? ಅಥವಾ ಇನ್ನೊಂದು ಓಟದ ಆರಂಭ?
ಸಮಸ್ಯೆಯ ಮೂಲ — ಕಾಣದ ಖಾಲಿತನ
ನಾವು ಬದುಕುತ್ತಿರುವುದು ನಮ್ಮದೇ ಆಯ್ಕೆ ಮಾಡಿದ ಬದುಕಲ್ಲ.ಇದು ಒಂದು conditioning — ಸಮಾಜ, ಕುಟುಂಬ, ಶಿಕ್ಷಣ, ಸಂಸ್ಕೃತಿ
ನಮ್ಮೊಳಗೆ ಬಿತ್ತಿದ ನಂಬಿಕೆಗಳ ಸಂಕಲನ.
ನಾವು ಆ ನಂಬಿಕೆಗಳನ್ನು ಪ್ರಶ್ನಿಸದೆ ಸ್ವೀಕರಿಸಿದ್ದೇವೆ.
ಆ ನಂಬಿಕೆಗಳ ಪ್ರಕಾರವೇ ಬದುಕುತ್ತೇವೆ.
ಆ ನಂಬಿಕೆಗಳನ್ನು ಸಾಧಿಸಲು ಹೋರಾಡುತ್ತೇವೆ.
ಆದರೆ, ಈ ಹೋರಾಟದ ಮಧ್ಯೆ ನಾವು ಗಮನಿಸದೇ ಹೋದ ಒಂದು ಸತ್ಯ ಇದೆ: ನಮ್ಮೊಳಗೆ ಪ್ರೇಮದ ಕೊರತೆ. ಯುದ್ಧಗಳು ಹೊರಗೆ ಅಲ್ಲ — ಒಳಗೆ ಆರಂಭವಾಗುತ್ತವೆ. ಜಗತ್ತಿನ ಎಲ್ಲಾ ಯುದ್ಧಗಳನ್ನು ನೋಡಿ. ಅವು ದೇಶಗಳ ನಡುವೆ ನಡೆಯುತ್ತಿರುವಂತಿದ್ದರೂ ಅವುಗಳ ಬೀಜ ಮಾನವನ ಒಳಗೆ ಬಿತ್ತಲ್ಪಟ್ಟಿವೆ. ದ್ವೇಷ, ಅಹಂಕಾರ, ಭಯ, ಸ್ವಾರ್ಥ .. ಇವುಗಳೇ ಯುದ್ಧದ ನಿಜವಾದ ಕಾರಣಗಳು.
ನಮ್ಮೊಳಗೆ ಪ್ರೇಮ ಇದ್ದರೆ, ನೀವು ಯಾರನ್ನೂ ಹಿಂಸಿಸಲಾರಿರಿ.ಒಬ್ಬರನ್ನು ನೋಯಿಸುವುದು ಅಂದರೆ
ಸ್ವತಃ ನಮ್ಮನ್ನೇ ನೋಯಿಸುವುದೆಂಬ ಅರಿವು ಮೂಡುತ್ತದೆ. ಆಗ ಗಡಿಗಳು ಅರ್ಥ ಕಳೆದುಕೊಳ್ಳುತ್ತವೆ…ಆಗ ಯುದ್ಧಗಳು ಅಸಂಬದ್ಧವಾಗುತ್ತವೆ…
ಪ್ರೇಮ — ಒಂದು ಭಾವನೆ ಅಲ್ಲ, ಒಂದು ಉನ್ನತ ಸ್ಥಿತಿ
ನಾವು ಸಾಮಾನ್ಯವಾಗಿ ಪ್ರೇಮವನ್ನು ಭಾವನೆ ಎಂದುಕೊಳ್ಳುತ್ತೇವೆ. ಆದರೆ ಅದು ಭಾವನೆ ಅಲ್ಲ — ಅದು ಅಸ್ತಿತ್ವದ ಗುಣ. ಭಾವನೆಗಳು ಬರುತ್ತವೆ, ಹೋಗುತ್ತವೆ. ಪ್ರೇಮ ಹಾಗಲ್ಲ. ಅದು ನೆಲೆಸುತ್ತದೆ… ಹರಿದುಕೊಳ್ಳುತ್ತದೆ…
ಪ್ರೇಮ ಅಂದರೆ ಹಿಡಿದುಕೊಳ್ಳುವುದು ಅಲ್ಲ,
ಬಿಡುವುದು.
ಪ್ರೇಮ ಅಂದರೆ ಪಡೆಯುವುದು ಅಲ್ಲ,
ಕೊಡುವುದು.
ಪ್ರೇಮ ಅಂದರೆ ನಿಯಂತ್ರಣ ಅಲ್ಲ,
ಸ್ವಾತಂತ್ರ್ಯ.
ಪ್ರಾಯೋಗಿಕ ಪ್ರಶ್ನೆ — “ಪ್ರೇಮದಿಂದ ಬದುಕು ಸಾಗುತ್ತದೆಯಾ?”
ಇದು ತುಂಬಾ ಸಾಮಾನ್ಯವಾದ ಪ್ರಶ್ನೆ.
“ಪ್ರೇಮ ಮಾತ್ರ ಸಾಕಾ? ಜೀವನವನ್ನು ನಡೆಸಲು?” ಎಂದು ಕೇಳುವವರು ತಪ್ಪಲ್ಲ.
ಆದರೆ ಇಲ್ಲಿ ಒಂದು ಸೂಕ್ಷ್ಮ ವಿಷಯವಿದೆ:
ಪ್ರೇಮವು ಜೀವನಕ್ಕೆ ಪರ್ಯಾಯವಲ್ಲ,
ಪ್ರೇಮವೇ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ.
ಹಣವೂ ಬೇಕು, ಕೆಲಸವೂ ಬೇಕು, ಸಂಬಂಧಗಳೂ ಬೇಕು —
ಆದರೆ ಅವುಗಳನ್ನೆಲ್ಲಾ ನಡೆಸುವ ಗುಣ ಪ್ರೇಮವಾಗಿದ್ದರೆ,
ಅವು ದುಃಖದ ಮೂಲವಾಗುವುದಿಲ್ಲ.
ಪ್ರೇಮವಿಲ್ಲದೆ
ಹಣ — ಲೋಭವಾಗುತ್ತದೆ
ಸಂಬಂಧ — ಬಂಧನವಾಗುತ್ತದೆ
ಅಧಿಕಾರ — ಶೋಷಣೆಯಾಗುತ್ತದೆ
ಪ್ರೇಮ ಇದ್ದರೆ
ಹಣ — ಸಾಧನವಾಗುತ್ತದೆ
ಸಂಬಂಧ — ಹೂವಿನಂತೆ ಅರಳುತ್ತದೆ
ಅಧಿಕಾರ — ಸೇವೆಯಾಗುತ್ತದೆ
ಸ್ವಯಂ ಪ್ರೇಮ — ಎಲ್ಲದರ ಆರಂಭ
ನಾವು ಪ್ರಪಂಚವನ್ನು ಪ್ರೀತಿಸಲು ಬಯಸುತ್ತೇವೆ,
ಆದರೆ ನಮ್ಮನ್ನೇ ಸ್ವೀಕರಿಸಲು ಹೆದರುತ್ತೇವೆ.
ಸ್ವತಃ ನಮ್ಮನ್ನು ಪ್ರೇಮಿಸದವನು
ಇತರರನ್ನು ಹೇಗೆ ಪ್ರೇಮಿಸಬಲ್ಲ?
ನೀವು ನಿಮ್ಮೊಳಗೆ ಸಂಪೂರ್ಣವಾಗಿ ಒಪ್ಪಿಕೊಂಡಾಗ,
ಒಂದು ಅದ್ಭುತವಾಗುತ್ತದೆ —
ನೀವು ಪ್ರತ್ಯೇಕ ವ್ಯಕ್ತಿ ಅಲ್ಲ ಎಂಬ ಅರಿವು ಮೂಡುತ್ತದೆ.
ಅಲ್ಲಿ “ನಾನು” ಮತ್ತು “ಇತರರು” ಎಂಬ ಭೇದ ಕರಗುತ್ತದೆ. ಧ್ಯಾನ — ಪ್ರೇಮದ ದ್ವಾರ
ಧ್ಯಾನ ಅಂದರೆ ಕಣ್ಣು ಮುಚ್ಚಿ ಕೂತುಕೊಳ್ಳುವುದು ಮಾತ್ರ ಅಲ್ಲ. ಧ್ಯಾನ ಅಂದರೆ ಬದುಕನ್ನು ಪ್ರಶ್ನಿಸುವ ಧೈರ್ಯ. “ನಾನು ಯಾರು?” “ನಾನು ಏಕೆ ಓಡುತ್ತಿದ್ದೇನೆ?” “ಈ ಓಟದ ಅಂತ್ಯ ಏನು?” ಈ ಪ್ರಶ್ನೆಗಳು ಒಳಗೆ ಹೊಕ್ಕಾಗ, ಅಲ್ಲಿ ಮೌನ ಹುಟ್ಟುತ್ತದೆ…
ಆ ಮೌನದಲ್ಲೇ ಪ್ರೇಮ ಮೊಳೆಯುತ್ತದೆ.
ಸಮಾಜದ ಸಂಕಟ — ಪ್ರೇಮವಿಲ್ಲದ ನಾಯಕತ್ವ
ಇಂದು ನಮ್ಮನ್ನು ನಡೆಸುತ್ತಿರುವವರು
ಅಧಿಕಾರವನ್ನು ತಿಳಿದವರು,
ಆದರೆ ಪ್ರೇಮವನ್ನು ಅರಿತವರಲ್ಲ.
ಆದ್ದರಿಂದ ಸಮಾಜದಲ್ಲಿ ನಿಯಮಗಳು ಹೆಚ್ಚು, ಆದರೆ ಹೃದಯ ಕಡಿಮೆ. ಪ್ರೇಮವಿಲ್ಲದ ಮನಸ್ಸು
ಸಂಸ್ಥೆಗಳನ್ನು ನಿರ್ಮಿಸಬಹುದು,
ಆದರೆ ಮಾನವತ್ವವನ್ನು ನಿರ್ಮಿಸಲಾರದು.
ಕೊನೆ ಮಾತು: ಕೇಂದ್ರಕ್ಕೆ ಹಿಂತಿರುಗುವುದು
ಬದುಕು ಒಂದು ವೃತ್ತದಂತೆ.
ನಾವು ಅದರ ಪರಿಧಿಯಲ್ಲಿ ಓಡುತ್ತಿದ್ದೇವೆ —
ಹಣ, ಹೆಸರು, ಯಶಸ್ಸು, ಅನುಭವಗಳ ಹಿಂದೆ.
ಆದರೆ ಅದರ ಕೇಂದ್ರ — ಪ್ರೇಮ.
ಅದನ್ನು ಮರೆಯುವಾಗ ಬದುಕು ಒಗಟಾಗುತ್ತದೆ.
ಒಮ್ಮೆ ಕೇಂದ್ರಕ್ಕೆ ಹಿಂತಿರುಗಿ…
ಅಲ್ಲಿ ಯಾವುದೇ ಗುರಿ ಇಲ್ಲ,
ಯಾವುದೇ ಭಯ ಇಲ್ಲ…
ಮಾತ್ರ ಪ್ರೇಮ ಇದೆ.
ಪ್ರೇಮವೊಂದೇ ಸಾಕು ಎಂದು ಹೇಳುವುದು ಅತಿಶಯೋಕ್ತಿಯಲ್ಲ…
ಪ್ರೇಮವಿಲ್ಲದೆ ಯಾವುದೂ ಸಾಕಾಗುವುದಿಲ್ಲ ಎಂಬ ಸತ್ಯದ ಅರಿವು.
ಜಯದೇವ ಪೂಜಾರ
7676870233
