ಟಿ.ನರಸೀಪುರ : ಶತ,ಶತಮಾನಗಳ ಕಾಲದಿಂದ ಒಂದೇ ತೆರನಾದ ದೌರ್ಜನ್ಯ, ಅಸ್ಪೃಶ್ಯತೆ ಮತ್ತು ಅವಮಾನಗಳಿಗೆ ಒಳಗಾಗಿ ಸಾಮಾಜಿಕವಾಗಿ ಶೋಷಣೆಗೆ ಒಳಗಾಗಿರುವ ಹೊಲಯ ಮತ್ತು ಮಾದಿಗ ಅಸ್ಪೃಶ್ಯ ಸಮುದಾಯದ ಜನರು ಪಟ್ಟಭದ್ರರ ಕುತಂತ್ರಗಳಿಗೆ ಬಲಿಯಾಗದಂತೆ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಕಿವಿಮಾತು ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ದಸಂಸ ತಾಲ್ಲೂಕು ಸಮಿತಿ ಕರೆದಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋಮುವಾದಿ ಮನಸ್ಸುಳ್ಳ ಕೆಲವು ರಾಜಕೀಯ ಶಕ್ತಿಗಳು ಅಸ್ಪೃಶ್ಯ ಸಮಾಜದ ಜನರನ್ನು ಒಬ್ಬರನ್ನೊಬ್ಬರು ಅನುಮಾನಗಳಿಂದ ನೋಡುವಂತೆ ಮಾಡಿ ಆ ಮೂಲಕ ತಮ್ಮ ರಾಜಕೀಯ ಲಾಭ ಗಳಿಸಲು ಕುತಂತ್ರ ಎಣೆಯುತ್ತಿದ್ದಾರೆ. ಈ ಎಚ್ಚರಿಕೆ ಅಸ್ಪೃಶ್ಯ ಸಮುದಾಯಗಳಿಗೆ ಇರಬೇಕಾಗಿದೆ.ಅಲ್ಲದೆ ಇತರೆ ಅಸ್ಪೃಶ್ಯ ಸಮುದಾಯವನ್ನು ಸಹ ಜಾಗೃತಗೊಳಿಸಿ ಜೊತೆಯಲ್ಲಿ ಕೊಂಡೊಯ್ಯುವ ನೈತಿಕ ಜವಾಬ್ದಾರಿಯನ್ನು ಹೊರಬೇಕಾಗಿದೆ.
ಜಾತಿ ಜನಗಣತಿಯನ್ನು ಸರ್ಕಾರ ಒಪ್ಪಿಕೊಂಡ ನಂತರ ಮೇಲ್ವರ್ಗದ ಕೆಲ ವ್ಯಕ್ತಿಗಳಿಗೆ ಕಾಯುವ ಎಣ್ಣೆ ಬಾಣಲೆಯಲ್ಲಿ ಹಾಕಿದಂತೆ ಆಗಿದೆ. ಎಲ್ಲಿ ತಮಗಿರುವ ರಾಜಕೀಯ ಅಸ್ತಿತ್ವಕ್ಕೆ ದಕ್ಕೆ ಆಗಲಿದೆಯೋ,ನಮ್ಮ ಜನಸಂಖ್ಯೆ ಕಡಿಮೆ ಇದ್ದರೆ ನಮ್ಮ ಗತಿ ಏನು…? ಅನ್ನುವ ತಳಮಳ ಪ್ರಾರಂಭವಾಗಿದೆ. ಕೆಲ ಲೋಪದೋಷಗಳು ಏನಾದರೂ ಇದ್ದರೆ ಅದನ್ನು ಚರ್ಚೆ ಮಾಡಿ ಸರಿಪಡಿಸಿ. ಸರ್ಕಾರ ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಜಾತಿ ಜನಗಣತಿ ವರದಿಯನ್ನು ಜಾರಿಗೆ ತಂದು ಅವಕಾಶ ವಂಚಿತರಿಗೆ ಅನುಕೂಲ ಮಾಡಿಕೊಡಬೇಕೆಂದರು.
ಏಪ್ರಿಲ್ 26 ಜನಜಾಗೃತಿ ಸಮಾವೇಶ
ಭಾರತದ ಸಂವಿಧಾನಕ್ಕೆ 75 ವರ್ಷಗಳ ಪೂರೈಕೆ ಹಿನ್ನೆಲೆಯಲ್ಲಿ, ಶೋಷಿತ ಮತ್ತು ಅಸ್ಪೃಶ್ಯ ಸಮುದಾಯಗಳ ಪ್ರಗತಿ, ಸಾದಕ ಬಾಧಕ ಕುರಿತು ತಾಲ್ಲೂಕು ಮಟ್ಟದ ಜಾಗೃತಿ ಸಮಾವೇಶವನ್ನು , ಏಪ್ರಿಲ್ 26, ಶನಿವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ದಸಂಸ ತಾಲ್ಲೂಕು ಸಂಚಾಲಕರಾದ ಯಾಚೇನಹಳ್ಳಿ ಸೋಮಶೇಖರ್,ಕುಕ್ಕೂರುರಾಜು, ಕಿರಗಸೂರು ರಜನಿ, ಆಲ್ಗೂಡು ನಾಗರಾಜ್ ಮೂರ್ತಿ, ಶಾಂತಕುಮಾರ್, ಬನ್ನಹಳ್ಳಿಹುಂಡಿ ಉಮೇಶ್, ಗೋವಿಂದ, ಇಂಡವಾಳು ನಾಗರಾಜು, ರಂಗ ಸಮುದ್ರ ನಂಜುಂಡ,ಕನ್ನಹಳ್ಳಿ ಶಶಿಕುಮಾರ್, ಕೇತಹಳ್ಳಿ ಪ್ರಶಾಂತ, ಹುಣಸಗಳ್ಳಿ ಜವರಪ್ಪ, ಕೆಂಪನಪುರ ಮಂಟಯ್ಯ ಇದ್ದರು.
