ಬೆಂಗಳೂರು, ಫೆ.17: ಉಸಿರಾಟದ ಕಾಯಿಲೆಗಳ ಆರೈಕೆ, ಸಂಶೋಧನೆ ಮತ್ತು ತಜ್ಞ ತರಬೇತಿಯನ್ನು ಬಲಪಡಿಸುವ ಉದ್ದೇಶದಿಂದ ಸಿಪ್ಲಾ ಫೌಂಡೇಶನ್ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (IISc) ನಡುವೆ ಮಹತ್ವದ ಸಹಭಾಗಿತ್ವ ಘೋಷಿಸಲಾಗಿದೆ. ಈ ಸಹಯೋಗದಡಿ ಬೆಂಗಳೂರಿನ ಟಾಟಾ ಐಐಎಸ್ಸಿ ಮೆಡಿಕಲ್ ಸ್ಕೂಲ್ ನಲ್ಲಿ ಅತ್ಯಾಧುನಿಕ “ಸಿಪ್ಲಾ ಫೌಂಡೇಶನ್ ಪಲ್ಮನರಿ ಮೆಡಿಸಿನ್ ಕೇಂದ್ರ” ಸ್ಥಾಪಿಸಲಾಗುತ್ತದೆ.
ಈ ಕೇಂದ್ರವು ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ರೋಗನಿರ್ಣಯ, ಹೊರರೋಗಿ ಹಾಗೂ ಒಳರೋಗಿ ಸೇವೆಗಳು, ವಿಶೇಷ ಐಸಿಯು (ICU) ಮತ್ತು ಹೈ ಡಿಪೆಂಡೆನ್ಸಿ ಘಟಕಗಳನ್ನು ಒಳಗೊಂಡ ಸಮಗ್ರ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಿದೆ. ಜೊತೆಗೆ COPD, ಇಂಟರ್ಸ್ಟಿಶಿಯಲ್ ಲಂಗ್ ಡಿಸೀಸ್ (ILD), ಆಸ್ತಮಾ ಮುಂತಾದ ಕಾಯಿಲೆಗಳಿಗಾಗಿ ಭಾರತಕ್ಕೆ ಹೊಂದುವ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವ ಸಂಶೋಧನೆಗೂ ಉತ್ತೇಜನ ನೀಡಲಿದೆ. ಬಯೋಮಾರ್ಕರ್, ಫಾರ್ಮಾಕೊಜೆನೊಮಿಕ್ಸ್, ಎಐ ಆಧಾರಿತ ರೋಗನಿರ್ಣಯ ಮತ್ತು ಚಿಕಿತ್ಸಾ ವಿಧಾನಗಳ ಮೇಲೂ ಸಂಶೋಧನೆ ನಡೆಯಲಿದೆ.
ಸಿಪ್ಲಾ ಫೌಂಡೇಶನ್ ಮುಖ್ಯಸ್ಥ ಅನುರಾಗ್ ಮಿಶ್ರಾ ಮಾತನಾಡಿ, “ಸಮುದಾಯಗಳಿಗೆ ಉತ್ತಮ ಗುಣಮಟ್ಟದ ಉಸಿರಾಟದ ಆರೈಕೆಯನ್ನು ಹತ್ತಿರ ತರುವುದೇ ನಮ್ಮ ಗುರಿ. ಈ ಕೇಂದ್ರವು ತರಬೇತಿ, ಆರೈಕೆ ಮತ್ತು ಸಂಶೋಧನೆಯನ್ನು ಒಟ್ಟುಗೂಡಿಸಿ ಶಾಶ್ವತ ಪರಿಣಾಮ ತರುವತ್ತ ಸಾಗುತ್ತದೆ” ಎಂದು ಹೇಳಿದರು.
ಐಐಎಸ್ಸಿ ನಿರ್ದೇಶಕ ಗೋವಿಂದನ್ ರಂಗರಾಜನ್ ಅಭಿಪ್ರಾಯಪಟ್ಟಂತೆ, ವಾಯು ಮಾಲಿನ್ಯ ಮತ್ತು ಜೀವನಶೈಲಿ ಬದಲಾವಣೆಗಳಿಂದ ಉಸಿರಾಟದ ಕಾಯಿಲೆಗಳು ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲಾಗಿ ಪರಿಣಮಿಸುತ್ತಿವೆ. ಈ ಸಹಭಾಗಿತ್ವವು ಉಸಿರಾಟದ ಆರೋಗ್ಯ ಕ್ಷೇತ್ರದಲ್ಲಿ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ ಎಂದು ತಿಳಿಸಿದರು.
ಭಾರತದಲ್ಲಿ ಉಸಿರಾಟದ ಕಾಯಿಲೆಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ಪಡೆದ ಪಲ್ಮನಾಲಜಿಸ್ಟ್ಗಳ ಕೊರತೆ, ವಿಶೇಷ ಚಿಕಿತ್ಸೆ ಸೌಲಭ್ಯಗಳ ಅಸಮಾನ ಲಭ್ಯತೆ ಮುಂತಾದ ಸಮಸ್ಯೆಗಳನ್ನು ಈ ಕೇಂದ್ರ ಭಾಗಶಃ ಪರಿಹರಿಸುವ ನಿರೀಕ್ಷೆ ಇದೆ. ಸಮುದಾಯ ಮಟ್ಟದಲ್ಲಿ ತಪಾಸಣೆ, ಗಾಳಿಯ ಗುಣಮಟ್ಟ ಜಾಗೃತಿ, ಧೂಮಪಾನ ನಿಲುಗಡೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತದೆ.
ಐಐಎಸ್ಸಿ 1909ರಲ್ಲಿ ಕೈಗಾರಿಕೋದ್ಯಮಿ ಜಮ್ಸೆಟ್ಜಿ ನುಸರ್ವಾಂಜಿ ಟಾಟಾ ಅವರ ದೂರದೃಷ್ಟಿಯ ಸಹಭಾಗಿತ್ವದಿಂದ ಸ್ಥಾಪನೆಯಾಗಿ, ಇಂದು ಭಾರತದ ಪ್ರಮುಖ ಸಂಶೋಧನಾ ಸಂಸ್ಥೆಯಾಗಿ ಬೆಳೆಯಿದೆ. ಸಂಸ್ಥೆಯು ಬಾಗ್ಚಿ-ಪಾರ್ಥಸಾರಥಿ ಆಸ್ಪತ್ರೆ ಜೊತೆಗೂಡಿ ಟಾಟಾ ಐಐಎಸ್ಸಿ ಮೆಡಿಕಲ್ ಸ್ಕೂಲ್ ಅಭಿವೃದ್ಧಿಪಡಿಸುತ್ತಿದೆ.
