ಹಾಸನ: ತಾಲೂಕಿನ ದುದ್ದ ಹೋಬಳಿ ವೇದಾವತಿ ಗ್ರಾಮದಲ್ಲಿ ರೈತನೊಬ್ಬ ಸಂಗ್ರಹಿಸಿ ಇಟ್ಟಿದ್ದ ಮೇವಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಗ್ರಾಮದ ರೈತ ರಂಗಸ್ವಾಮಿ ಅವರಿಗೆ ಸೇರಿದ ಸುಮಾರು 5 ಲೋಡಿಗಿಂತ ಹೆಚ್ಚು ಮೇವಿನ ಸಂಗ್ರಹಣೆ ಮಾಡಲಾಗಿದ್ದ ಬಣವೆಗೆ ಬೆಂಕಿ ತಗುಲಿದ್ದು, ಅಂದಾಜು ಸುಮಾರು 70 ಸಾವಿರ ರೂ.ಗೂ ಅಧಿಕ ಮೌಲ್ಯದ ಮೇವು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಹಾಸನ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಬಹಳಷ್ಟು ಶ್ರಮಿಸಿದರು. ಈ ವೇಳೆ ಗ್ರಾಮಸ್ಥರು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರೋವರ್ ನಾರಾಯಣಗೌಡ ಅವರು ಸಹ ಅಗ್ನಿಶಾಮಕ ಸಿಬ್ಬಂದಿಗೆ ಸಹಕಾರ ನೀಡಿದರು.
ಸಾಲ ಮಾಡಿ ದನಕರುಗಳಿಗೆ ಮೇವು ತರಿಸಿ ಸಂಗ್ರಹಿಸಿದ್ದೆ. ಆದರೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಮೇವು ನಾಶವಾಗಿದೆ. ಇದರಿಂದ ದನಕರುಗಳಿಗೆ ಮೇವು ಇಲ್ಲದಂತಾಗಿದೆ ಎಂದು ರೈತ ರಂಗಸ್ವಾಮಿ ನೋವಿನಿಂದ ಹೇಳಿದರು.
ಘಟನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತನಿಗೆ ಜಿಲ್ಲಾಡಳಿತದಿಂದ ತಕ್ಷಣ ನೆರವು ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖ ಅಗ್ನಿಶಾಮಕ ಸಿಬ್ಬಂದಿಯಾದ ಮುರಳೀಧರ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
