ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮೊನ್ನೆ ರಂಗಭೂಮಿ ಟ್ರಸ್ಟ್ ಕೊಡಗು ಕಲಾವಿದರು ಶ್ರೀ ಅಡ್ಡಂಡ ಕಾರ್ಯಪ್ಪ ರಚನೆಯ ನಿಜಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶಿಸಿದರು. ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕರು ಶ್ರೀ ಅಡ್ಡಂಡ ಕಾರ್ಯಪ್ಪನವರು ಕೊಡಗು ಜಿಲ್ಲೆಯವರು. ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡು ಇವರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶಿಸಿದ ಹೆಗ್ಗಳಿಕೆ ಇವರದು. ಇವರು ಈ ಹಿಂದೆ ಹಾಸನದಲ್ಲಿ ಪರ್ವ ಕಾದಂಬರಿಯನ್ನು ನಾಟಕವಾಗಿ ಪ್ರದರ್ಶಿಸಿದ್ದರು. ಹಿಂದೆ ಇವರ ತಂಡದ ಟಿಪ್ಪು ನಿಜಕನಸುಗಳು ಮತ್ತು ಕರಿನೀರ ವೀರ ನಾಟಕಗಳನ್ನು ನೋಡಿ ಬರೆದಿದ್ದೆ. ಇವರ ಇನ್ನೊಂದು ನಾಟಕ ಸತ್ಯವನ್ನೇ ಹೇಳುತ್ತೇನೆ. ಈ ನಾಟಕವು ಡಾ. ಅಂಬೇಡ್ಕರ್ ವಿಷಯದಲ್ಲಿ ಬಚ್ಚಿಟ್ಟ ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಎಂದಿದ್ದಾರೆ.

ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಸ್ವಪ್ರಯತ್ನ ಸಾಧನೆಗಳಿಂದ ಮಾನವತಾವಾದಿಯಾಗಿ ಒಂದು ಅರ್ಥದಲ್ಲಿ ನಿಜಮಹಾತ್ಮರಾಗಿ ಬೆಳೆದಿದ್ದು ಅದ್ಭುತ ಯಶೋಗಾಥೆ. ಅವರ ವ್ಯಕ್ತಿತ್ವ, ವಿದ್ವತ್ತು, ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ, ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಶ್ರಮ ಅದ್ವಿತೀಯ. ಬಾಬಾ ಸಾಹೇಬರ ಬಗ್ಗೆ ಸಾಮಾಜಿಕ ಕ್ರಾಂತಿ ಸೂರ್ಯ ಪುಸ್ತಕ ಬರೆದ ದತ್ತೋಪಂತ್ ಠೇಂಗಡಿ ಅವರ ನಿರೂಪಣೆಯಲ್ಲಿ ತೆರೆದುಕೊಳ್ಳುತ್ತದೆ ನಾಟಕ. ಅವರ ಜೀವನವನ್ನು ರಾಜಕೀಯ ಕಥಾನಕಗಳಿಂದ ಹೊರತಂದು ರಾಷ್ಪ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸಿದೆ. ಅವರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸದೆ ಅವರ ನೈಜ ಸ್ವಭಾವಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ ವಿರೋಧಿಸುವ ಧೈರ್ಯ, ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧರಾಗುವ ಮಹಾ ಮಾನವತೆಯನ್ನು ನೋಡಬಯಸುತ್ತದೆ.

ಬಾಬಾಸಾಹೇಬರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದಲ್ಲಿ ತರಲಾಗಿದೆ. ಅವರ ವೈವಾಹಿಕ ಜೀವನ, ರಾಷ್ಪ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಅವರಿಗಿದ್ದ ನಿಲುವು, ಸಂವಿಧಾನ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ನಡುವಿನ ಸಂಬಂಧ ಇವೆಲ್ಲವನ್ನು ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪರದೆಯ ಮೇಲೆ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಪ್ರಸ್ತುತಿಪಡಿಸುತ್ತದೆ. ರಾಷ್ಪ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹಡ್ಗೆವಾರ್ ಮತ್ತು ಬಾಬಾ ಸಾಹೇಬರು ಒಂದೇ ಕಾಲಘಟ್ಟದಲ್ಲಿದ್ದವರು. ಇವರಿಬ್ಬರ ಭೇಟಿ ವಿಚಾರ ವಿನಿಮಯ ಸಂಘದ ಶಿಬಿರಕ್ಕೆ ಭೇಟಿಯಿತ್ತ ಬಾಬಾ ಸಾಹೇಬರು ಅಲ್ಲಿ ಯಾರೂ ಜಾತಿಯಿಂದ ಗುರುತಿಸಿಕೊಳ್ಳದೇ ಹಿಂದೂಗಳಾಗಿ ಗುರುತಿಸಿಕೊಂಡಿದ್ದನ್ನು ವಿಶೇಷವಾಗಿ ಗಮನಿಸುತ್ತಾರೆ.

ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದ ಹಿಂದೂ ಕೋಡ್ ಬಿಲ್ ಅನ್ನು ೧೯೫೧ರಲ್ಲಿ ಸರಕಾರ ಮುಂದೂಡಿದ ಕಾರಣ ಬಾಬಾ ಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ನೀಡಿದರು. ೧೯೫೨ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಅವರ ಸೋಲು ಅಘಾತಕಾರಿ. ೧೯೫೬ರ ಡಿಸೆಂಬರ್ ೬ರಂದು ಅಂಬೇಡ್ಕರ್ ಅಸ್ತಂಗತರಾದಾಗ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ದೊರಕದಿರುವುದು ವಿಷಾದನೀಯ. ಈ ಅಂಶಗಳ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ.
೧೯೨೭ರಲ್ಲಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚವದಾರ್ ಕೆರೆ ಸತ್ಯಾಗ್ರಹ ಮತ್ತು ೧೯೩೦ರಲ್ಲಿ ನಾಸಿಕ್ನ ಕಾಳಾರಾಮ ದೇವಸ್ಥಾನ ಪ್ರವೇಶ ಚಳುವಳಿ ಇವು ಅವರ ಸಾಮಾಜಿಕ ಹೋರಾಟಗಳ ಪ್ರಮುಖ ಮೈಲಿಗಲ್ಲು. ದೇವಸ್ಥಾನಕ್ಕೆ ಹೋಗಿಬರಬೇಕೆಂದು ಬಯಸುವ ಪತ್ನಿಯನ್ನು ಸಂಭಾಳಿಸುವ ಸನ್ನಿವೇಶವು ಮನ ಕಲಕುತ್ತದೆ.

ಸ್ವಾತಂತ್ರ್ಯ ದೊರಕಿದ ಆರು ವರ್ಷಗಳ ಮೊದಲೇ ಬಾಬಾ ಸಾಹೇಬರು ಬರೆದ ಥಾಟ್ಸ್ ಆಫ್ ಪಾಕಿಸ್ಥಾನ (Thoughts of Pakisthan) ಕೃತಿಯನ್ನು ಪ್ರೇಕ್ಷಕರು ಓದಬೇಕೆಂದು ನಾಟಕದ ಮಧ್ಯಾಂತರದಲ್ಲಿ ಬಂದು ನಾಟಕಕಾರರು ನಿವೇದಿಸುತ್ತಾರೆ. ಬಾಬಾಸಾಹೇಬರ ಬದುಕು ತೆರೆದ ಪುಸ್ತಕ. ಅವರು ಬದುಕನ್ನು ಅಕ್ಷರಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ನಾವು ಓದಬೇಕಷ್ಟೇ. ಅವರು ಇದನ್ನು ಬರೆದಿದ್ದು ದೇಶ ವಿಭಜನೆಯ ಉದ್ದೇಶದಿಂದಲ್ಲ. ವಿಭಜನೆ ತರುವ ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಪರಿಣಾಮಗಳನ್ನು ಅದರಲ್ಲಿ ವಿಶ್ಲೇಷಿಸಿದ್ದರು. ಧರ್ಮದ ಆಧಾರದಲ್ಲಿ ದೇಶ ಒಡೆಯುವುದೇ ಆದರೆ ಸಂಪೂರ್ಣ ಪ್ರಜಾ ವಿನಿಮಯವಾಗಬೇಕು ಎಂಬುದು ಅವರ ನಿಲುವು. ಗಾಂಧೀಜಿಯವರು ಪ್ರಜಾ ವಿನಿಯಯ ಮಾಡಿಕೊಳ್ಳಬೇಕೆಂಬ ಅವರ ಬೇಡಿಕೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಬಾಬಾ ಸಾಹೇಬರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಮಾಡುವ ದೃಶ್ಯ ಯಾಕೋ ಗಾಂಧೀ ಪಾತ್ರ ವ್ಯಂಗ್ಯವಾಗಿ ಗೋಚರಿಸಿತು.

ಇತ್ತ ಸಾರ್ವಕರರು ಧರ್ಮಾಧಾರಿತ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಖಂಡ ಬಾರತ ಎಂಬ ರಾಷ್ಪ್ರ ಕಲ್ಪನೆಯನ್ನು ಸ್ಫಷ್ಟವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬರು ಮತ್ತು ಸಾವರ್ಕರರ ನಡುವೆ ರಾಷ್ಟ್ರ ಧರ್ಮ ಮತ್ತು ಭವಿಷ್ಯದ ಭಾರತದ ಕುರಿತ ಚರ್ಚೆಗಳು ಮುಖಾಮುಖಿ ಸಂಭಾಷಣೆಯಲ್ಲಿ ಅಭಿವ್ಯಕ್ತವಾಗುತ್ತದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲೂ ಬಿಗಿ ತಪ್ಪದ ಕಥಾ ನಿರೂಪಣೆ, ಪಕ್ಕ ಲೈಟಿಂಗ್ಸ್ (ತೀರ್ಥಳ್ಳಿ ಶಿವಕುಮಾರ್) ನಾಟಕದ ಹೈಲೆಟ್ಸ್. ಸುಮಾರು ೨ ಗಂಟೆ ೧೦ ನಿಮಿಷದ ನಾಟಕದಲ್ಲಿ ಪ್ರಮುಖವಾಗಿ ಇಡೀ ನಾಟಕ ಆವರಿಸಿಕೊಂಡಿರುವ ಬಾಬಾಸಾಹೇಬರ ಪಾತ್ರವನ್ನು ಅಜಿತ್ಕುಮಾರ್ ಸಮರ್ಥವಾಗಿ ನಿಭಾಯಿಸಿದರು. ನಾಟಕದ ಇತರ ಕಲಾವಿದರು ನಾಟಕದ ಹಲವಾರು ಪಾತ್ರಗಳನ್ನು ಹಂಚಿಕೊಂಡರು.
ಅಶೋಕ್ಗೌಡ ಅವರು ಸುಧಾಮ, ಅರುಣ್ಚಂದ್ರ ಗುಹಾ ಪಾತ್ರಗಳನ್ನು, ಉಡುಪಿ ಸರ್ವೇಶ್ ಅವರು ರತ್ತು, ಮೆಹಬೂಬ್ ಆಲಿಬೇಗ್ ಪಾತ್ರಗಳನ್ನು, ಶರಣು ಯಳವಾರ ಅವರು ಬೋನ್ಸಲೆ, ಮಹಾವೀರ್ ತ್ಯಾಗಿ ಪಾತ್ರಗಳನ್ನು ಶಿವಕುಮಾರ್ ಅವರು ಶಂಕರಾನಂದ ಶಾಸ್ತ್ರೀ ಗಾಯಕ್ವಾಡ್, ಹೆಚ್.ವಿ.ಕಾಮತ್ ಪಾತ್ರಗಳನ್ನು, ಮನೋಜ್ ಅವರು ಅಮಿನ್ ಚಂದ್ ಗಾಂಧಿ, ಮೌಲಾನ ಆಶ್ರತ್ ಮೊಹಾನಿ ಪಾತ್ರಗಳನ್ನು, ಮಧು ಎಂ. ಕೇಶವ ಬಲಿರಾಮ್ ಹೆಡಗೆವಾರ್, ಡಾ. ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು, ಶ್ರೇಯಸ್ ವೆಂಕಟೇಶ್ ವೀರಸಾವರ್ಕರ್ ಪಾತ್ರ ಹಾಗೂ ಸಚಿನ್ರಾಜ ಅವರು ದತ್ತೋಪಂಥ ಶೇಂಗಡಿ, ಟಿ.ಟಿ.ಕೃಷ್ಣಮಾಚಾರಿ ಪಾತ್ರಗಳನ್ನು ನಿಭಾಯಿಸಿದರು. ಇದೇ ಕಲಾವಿದರು ನಾಟಕದಲ್ಲಿ ಬಂದು ಹೋಗುವ ಗಾಂಧಿ ಭಕ್ತರು, ಸ್ವಯಂ ಸೇವಕರು ದಲಿತರ ಪಾತ್ರಗಳನ್ನು ನಿರ್ವಹಿಸಿದರು. ಅನಿತಾ ಕಾರ್ಯಪ್ಪರವರು ನಾಟಕದ ಸ್ತ್ರೀ ಪಾತ್ರಗಳು ಡಾ. ಸವಿತ ಅಂಬೇಡ್ಕರ್, ರಮಾದೇವಿ ಮತ್ತು ರೇಣುಕಾ ರೇ ಪಾತ್ರಗಳಲ್ಲಿ ಅಭಿನಯಿಸಿದರು. ರಘುಪ್ರಸಾದ್ ನೀನಾಸಮ್ ಅವರಿಂದ ಸ್ಕ್ರೀನ್ ಮೇಲೆ ಮೂಡಿಬಂದ ದೃಶ್ಯ ಚಿತ್ರ ದಾಖಲೀಕರಣ ಗಮನಾರ್ಹ.
—

ಗೊರೂರು ಅನಂತರಾಜು, ಹಾಸನ.
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ
