ರಾಮನಾಥಪುರ: ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ವಿದ್ಯಾರ್ಥಿಗಳಲ್ಲಿ ಉಂಟಾಗುವ ಮಾನಸಿಕ ಒತ್ತಡ, ನಿರಾಶೆ ಮತ್ತು ಅತಿರೇಕದ ನಿರ್ಧಾರಗಳ ಬಗ್ಗೆ ಎಚ್ಚರಿಸುವಂತ ಒಂದು ಮನಮುಟ್ಟುವ ಬದುಕಿನ ಕಥೆಯನ್ನು ಹಂಚಿಕೊಂಡಿದ್ದಾರೆ ಹಾಸನದ ಹಿರಿಯ ಉಪ ನಿರ್ದೇಶಕರಾದ ಡಾ. ಅಶೋಕ್ ಹನ್ಯಾಳು.
ಅವರು ತಮ್ಮ ವೈಯಕ್ತಿಕ ಅನುಭವವನ್ನು ಉದಾಹರಿಸಿ, “ಒಂದು ಪರೀಕ್ಷೆಯಲ್ಲಿ ಸೋತರೆ ಜೀವನವೇ ಮುಗಿದುಹೋಯಿತು ಎಂದುಕೊಳ್ಳಬೇಡಿ. ಸೋಲು ಅಂತಿಮವಲ್ಲ, ಅದು ಯಶಸ್ಸಿನ ಮೊದಲ ಮೆಟ್ಟಿಲು” ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ಒಂದು ದುರಂತದಿಂದ ಆರಂಭವಾದ ನೆನಪು
ಡಾ. ಅಶೋಕ್ ಹನ್ಯಾಳು ಹೇಳುವಂತೆ, ಪಿಯುಸಿ ಫಲಿತಾಂಶ ಬಂದ ಮರುದಿನ ಬೆಳಿಗ್ಗೆ ಪಕ್ಕದ ಫ್ಲಾಟ್ನಲ್ಲಿ ಅಳುವ ಶಬ್ದ ಕೇಳಿ ವಿಚಾರಿಸಿದಾಗ, ಒಂದು ವಿಷಯದಲ್ಲಿ ಅನುತ್ತೀರ್ಣನಾದ ಕಾರಣ ಮನೆಯವರ ಬೈಗುಳ ತಾಳಲಾರದೆ ಸುನಿಲ್ (ಕಾಲ್ಪನಿಕ ಹೆಸರು) ಎಂಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬೆಚ್ಚಿಬಿದ್ದರು.
“ಇಷ್ಟು ಸಣ್ಣ ಕಾರಣಕ್ಕೆ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳಬಾರದು” ಎಂಬ ನೋವು ಮನಸ್ಸಿನಲ್ಲಿ ಮೂಡಿದಾಗ, ತಮ್ಮದೇ ಹಳೆಯ ಬದುಕಿನ ಹಾದಿ ನೆನಪಿಗೆ ಬಂದಿದೆ ಎಂದು ಅವರು ಹೇಳಿಕೊಂಡಿದ್ದಾರೆ.

2002ರಲ್ಲಿ ಪಿಯುಸಿ ಫೇಲ್… ಬೆಂಗಳೂರಿನ ಕಠಿಣ ಬದುಕು
2002ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ, ಊರಿನಲ್ಲಿ ಏನು ಮಾಡಬೇಕು ಎಂಬ ಗೊಂದಲದಿಂದ ಅವರು ಬೆಂಗಳೂರು ಸೇರಿದರು.
ಅಲ್ಲಿ ಸುಮಾರು ಐದು ವರ್ಷಗಳ ಕಾಲ ಕಾರ್ ಶೋರೂಮ್, ಆಸ್ಪತ್ರೆ, ಡೈರೆಕ್ಟ್ ಮಾರ್ಕೆಟಿಂಗ್ ಸೇರಿದಂತೆ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸಿದರು.
“ಮಾಡದ ಕೆಲಸವಿಲ್ಲ, ಅನುಭವಿಸದ ಅವಮಾನವಿಲ್ಲ” ಎಂದು ತಮ್ಮ ಹೋರಾಟದ ದಿನಗಳನ್ನು ಅವರು ಸ್ಮರಿಸಿದ್ದಾರೆ.
ಪ್ರತಿ ವರ್ಷ ಪರೀಕ್ಷೆ ಬರೆದರೂ, ಪದೇ ಪದೇ ಅನುತ್ತೀರ್ಣರಾಗುತ್ತಿದ್ದ ಪರಿಸ್ಥಿತಿ ಅವರನ್ನು ಇನ್ನಷ್ಟು ಕುಗ್ಗಿಸಿತು. ತಮ್ಮಿಗಿಂತ ಚಿಕ್ಕವರು ಉತ್ತಮವಾಗಿ ಓದಿ ಉತ್ತಮ ಉದ್ಯೋಗಗಳಲ್ಲಿ ನೆಲೆಯೂರಿದಾಗ, “ನಾನು ಮಾತ್ರ ಐದು ವರ್ಷ ಹಿಂದೆ ಇದ್ದಲ್ಲೇ ನಿಂತಿದ್ದೇನೆ” ಎಂಬ ಭಾವನೆ ಕಾಡುತ್ತಿತ್ತಂತೆ.
ತಮ್ಮನ ಯಶಸ್ಸು, ಪ್ರಾಂಶುಪಾಲರ ಮಾತು… ತಿರುವು ತಂದ ಕ್ಷಣ
ಇದೇ ಅವಧಿಯಲ್ಲಿ ತಮ್ಮ ತಮ್ಮ ಇಂಜಿನಿಯರಿಂಗ್ ಪೂರ್ಣಗೊಳಿಸಿ ಮುಂಬೈನ L&T ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು.
ಒಂದೆಡೆ ತಮ್ಮನ ಸಾಧನೆಯ ಸಂತೋಷ ಇದ್ದರೂ, ಮತ್ತೊಂದೆಡೆ ತಮ್ಮ ಭವಿಷ್ಯದ ಚಿಂತೆ ಹೆಚ್ಚಿತು.
ಮತ್ತೊಮ್ಮೆ ಪರೀಕ್ಷೆಗೆ ಅರ್ಜಿ ಹಾಕಲು ಕಾಲೇಜಿಗೆ ಹೋದಾಗ, ಪ್ರಾಂಶುಪಾಲರು “ಇನ್ನೆಷ್ಟು ಸಲ ಪರೀಕ್ಷೆ ಬರೆಯಬೇಕು ಅಂದುಕೊಂಡಿದ್ದೀಯಪ್ಪ?” ಎಂದು ಕೇಳಿದ ಮಾತು ಅವರ ಬದುಕಿಗೆ ತಿರುವು ತಂದಿತು.
“ಮೊದಲು ಪಿಯುಸಿ ಪಾಸ್ ಆಗಬೇಕು, ನಂತರ ಏನಾದರೂ ಮಾಡಬಹುದು” ಎಂದು ದೃಢ ನಿರ್ಧಾರ ಮಾಡಿಕೊಂಡ ಅವರು ಈ ಬಾರಿ ಕಷ್ಟಪಟ್ಟು ಓದಿ, ಐದು ವರ್ಷಗಳ ಬಳಿಕ ಪಿಯುಸಿಯಲ್ಲಿ ಉತ್ತೀರ್ಣರಾದರು.
ಪಿಯುಸಿಯಿಂದ ಪಿಎಚ್ಡಿ ವರೆಗೆ ಸಾಧನೆಯ ಪಯಣ
ಪಿಯುಸಿ ನಂತರ ಅವರು ಡಿಗ್ರಿಗೆ ಸೇರಿದರು.
ಬೆಳಿಗ್ಗೆ ಕಾಲೇಜು, ಸಂಜೆ ಕೆಲಸ—ಹೀಗೆ ಕಠಿಣ ಪರಿಶ್ರಮದ ಮಧ್ಯೆಯೇ ಓದನ್ನು ಮುಂದುವರಿಸಿದರು.
ಡಿಗ್ರಿ ಓದುವ ಅವಧಿಯಲ್ಲಿ ಓದಿನ ಮೇಲೆ ಆಸಕ್ತಿ ಹೆಚ್ಚಿ, ನಂತರ ಎಂಬಿಎಯಲ್ಲಿ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣರಾದರು.
ಮುಂದೆ ಮೊದಲ ಪ್ರಯತ್ನದಲ್ಲೇ NET ಅರ್ಹತೆ ಪಡೆದು, ತಾವು ಓದಿದ ಕಾಲೇಜಿನಲ್ಲೇ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಪಡೆದರು.
ಅಲ್ಲಿಗೆ ನಿಲ್ಲದೆ ಕರಸ್ಪಾಂಡೆನ್ಸ್ ಮೂಲಕ ಎಂ.ಕಾಂ ಪೂರ್ಣಗೊಳಿಸಿ, ಬಳಿಕ ಪಿಎಚ್ಡಿ ಮಾಡಿ ಡಾಕ್ಟರೇಟ್ ಪದವಿ ಪಡೆದರು.
ಇದರ ಜೊತೆಗೆ KPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಗ್ರೂಪ್-ಬಿ ಅಧಿಕಾರಿಯಾಗಿ ಕರ್ನಾಟಕ ಸರ್ಕಾರದ ಉನ್ನತ ಹುದ್ದೆಯನ್ನು ಅಲಂಕರಿಸಿದರು.
ಈಗ ಅವರು ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಹಿರಿಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
“ಕಾರ್ ಒರಿಸುತ್ತಿದ್ದ ನನ್ನ ಮನೆಗೆ ಈಗ ಸರ್ಕಾರದ ಕಾರು ಬರುತ್ತದೆ”
ತಮ್ಮ ಬದುಕಿನ ಬದಲಾವಣೆಯನ್ನು ನೆನೆದು ಅವರು ಹೇಳುವ ಮಾತು ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ:
“ಒಂದು ಕಾಲದಲ್ಲಿ ಕಾರ್ ಶೋರೂಮ್ನಲ್ಲಿ ಕಾರ್ ಒರಿಸುತ್ತಿದ್ದ ನನ್ನ ಮನೆಗೆ ಇಂದು ಸರ್ಕಾರದ ಕಾರು ಬರುತ್ತದೆ. ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ನಾನು, ಇಂದು ಆಸ್ಪತ್ರೆಯ ಅಧಿಕಾರಿಯಾಗುವ ಮಟ್ಟಿಗೆ ಜೀವನ ಬದಲಾಗಿದೆ.”

ವಿದ್ಯಾರ್ಥಿಗಳಿಗೆ ಧೈರ್ಯದ ಸಂದೇಶ
ಇಂದಿನ ಯುವಜನತೆಗೆ ಅವರು ನೀಡಿದ ಸಂದೇಶ ಸ್ಪಷ್ಟವಾಗಿದೆ:
- ಒಂದು ಪರೀಕ್ಷೆಯಲ್ಲಿ ಫೇಲ್ ಆದರೆ ಜೀವನ ಮುಗಿಯುವುದಿಲ್ಲ
- ಸೋಲು ಯಶಸ್ಸಿನ ಮೊದಲ ಮೆಟ್ಟಿಲು
- ಕಠಿಣ ಪರಿಶ್ರಮ, ಶ್ರದ್ಧೆ, ನಿಯತ್ತು ಇದ್ದರೆ ಏನಾದರೂ ಸಾಧಿಸಬಹುದು
- “ಇದು ನನ್ನ ಕೈಲಿ ಆಗಲ್ಲ” ಎನ್ನುವ ನೆಗೆಟಿವ್ ಚಿಂತನೆ ತೊರೆದು, “ನಾನು ಮಾಡುತ್ತೇನೆ” ಎನ್ನುವ ಧೈರ್ಯ ಬೆಳೆಸಿಕೊಳ್ಳಬೇಕು
“ಜೀವನ ಎನ್ನುವುದು ಸೋಲು-ಗೆಲುವಿನ ಆಟ. ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಬೇಕೆಂಬ ಛಲ ಇರುತ್ತದೆ. ಛಲದಿಂದ ಕೆಲಸ ಮಾಡಿದರೆ ಯಾವುದು ವಿಫಲವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಸೋತವರಿಗೆ ದಾರಿ ತೋರಿಸುವ ಬದುಕಿನ ಪಾಠ
ಪಿಯುಸಿಯಲ್ಲಿ ಫೇಲ್ ಆದ ಒಬ್ಬ ಯುವಕನಿಂದ ಹಿಡಿದು, ಪಿಎಚ್ಡಿ ಪಡೆದು ಸರ್ಕಾರಿ ಉನ್ನತಾಧಿಕಾರಿಯಾಗಿ ಬೆಳೆದ ಡಾ. ಅಶೋಕ್ ಹನ್ಯಾಳು ಅವರ ಬದುಕು, ಇಂದಿನ ವಿದ್ಯಾರ್ಥಿಗಳಿಗೆ “ಒಂದು ಫಲಿತಾಂಶವೇ ಜೀವನದ ಅಂತಿಮ ತೀರ್ಪಲ್ಲ” ಎಂಬ ಅಮೂಲ್ಯ ಸಂದೇಶವನ್ನು ಸಾರುತ್ತಿದೆ.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
