
ಮಾರ್ನಿಂಗ್ ಕ್ವಿಕ್ ನ್ಯೂಸ್ ಟೈಮ್
ಶುಭೋದಯ
ಗಾಳಿ ಬೀಸುತ್ತಿರುವಾಗ ನೀರು ಅಲೆಗಳಿಂದ ಒಂದು ಕ್ಷಣವೂ ನಿಶ್ಚಲವಾಗಿರುವುದಿಲ್ಲ.
ಮನಸ್ಸೂ ಹಾಗೆಯೇ, ಆದ್ದರಿಂದ ಅದನ್ನು ನಂಬಬಾರದು!
-ದಕ್ಷ ಸ್ಮೃತಿ
************************
1.ಕರ್ನಾಟಕದಲ್ಲಿ ಇನ್ಮುಂದೆ ತಯಾರಾಗುವ ಎಲ್ಲಾ ಉತ್ಪನ್ನಗಳ ಮೇಲೆ ಕನ್ನಡ ಲೇಬಲ್ ಕಡ್ಡಾಯ
ಕರ್ನಾಟಕದಲ್ಲಿ ಉತ್ಪಾದನೆಯಾಗುವ ಎಲ್ಲಾ ಉತ್ಪನ್ನಗಳ ಲೇಬಲ್ಗಳಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ ಭಾಷೆಯನ್ನು ಸೇರಿಸಲು ಕ್ರಮಕೈಗೊಳ್ಳುವುದಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದರಂತೆ ಇದೀಗ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ತಯಾರಾಗುವ ಉತ್ಪನ್ನಗಳಿಗೆ ಕನ್ನಡ ಲೇಬಲ್, ಹೆಸರು ಡೈರೆಕ್ಷನ್ ಸೇರಿದಂತೆ ಎಲ್ಲವೂ ಕನ್ನಡದಲ್ಲಿ ಇರಬೇಕೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
*******************************
2.ಉತ್ತರಾಖಂಡ: ಹಿಮಪಾತದಲ್ಲಿ ಸಿಲುಕಿದ್ದ 32 ಕಾರ್ಮಿಕರ ರಕ್ಷಣೆ, ಹಿಮದಡಿ ಇನ್ನೂ 23 ಮಂದಿ; ರಕ್ಷಣಾ ಕಾರ್ಯಾಚರಣೆ ಸ್ಥಗಿತ
ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಮಾನಾ ಬಳಿ ಶುಕ್ರವಾರ ಸಂಭವಿಸಿದ ಭಾರೀ ಹಿಮಪಾತದಲ್ಲಿ ಸಿಲುಕಿದ್ದ ಗಡಿ ರಸ್ತೆ ಸಂಸ್ಥೆ(ಬಿಆರ್ಒ) 55 ಕಾರ್ಮಿಕರ ಪೈಕಿ 32 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 55ಕ್ಕೂ ಹೆಚ್ಚು ಕಾರ್ಮಿಕರು ಹಿಮಪಾತದಲ್ಲಿ ಸಿಲುಕಿಕೊಂಡಿದ್ದರು. ಇದುವರೆಗೆ 32 ಜನರನ್ನು ರಕ್ಷಿಸಲಾಗಿದೆ. ಇನ್ನೂ 23 ಕಾರ್ಮಿಕರು ಹಿಮದಡಿ ಸಿಲುಕಿದ್ದು, ಭಾರೀ ಹಿಮಪಾತದಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
*********************************
3.ಇಶಾ ಫೌಂಡೇಷನ್ಗೆ ಬಿಗ್ ರಿಲೀಫ್: ಶೋಕಾಸ್ ನೋಟಿಸ್ ರದ್ದತಿಯನ್ನು ಎತ್ತಿ ಹಿಡಿದ ಸುಪ್ರೀಂ
ಗುರು ಜಗ್ಗಿ ವಾಸುದೇವ್ ನಡೆಸುತ್ತಿರುವ ಈಶಾ ಫೌಂಡೇಶನ್ಗೆ ಸುಪ್ರೀಂಕೋರ್ಟ್ ಬಿಗ್ ರಿಲೀಫ್ ನೀಡಿದೆ. ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು ಇಶಾ ಫೌಂಡೇಶನ್ಗೆ ನೀಡಿದ್ದ ಶೋಕಾಸ್ ನೋಟಿಸ್ ಅನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿತ್ತು. ಇದೀಗ ಮದ್ರಾಸ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಈಗ ಸುಪ್ರೀಂಕೋರ್ಟ್ ಸಹ ಎತ್ತಿ ಹಿಡಿದೆ.
*******************************
4.ವಾಟ್ಸಾಪ್ ಮೂಲಕ ನೋಟಿಸ್ ನೀಡುವಂತಿಲ್ಲ: ಆಡುಗೋಡಿ ಪೊಲೀಸರು ನೀಡಿದ್ದ ನೋಟಿಸ್ ರದ್ಧು ಮಾಡಿದ ಹೈಕೋರ್ಟ್
ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆ ಮೂಲಕ ತಮಿಳುನಾಡಿನ ಪವನ್ ಕುಮಾರ್ ಅವರಿಗೆ ಆಡುಗೋಡಿ ಪೊಲೀಸರು ವಾಟ್ಸಾಪ್ ಮೂಲಕ ನೀಡಿದ್ದ ನೋಟಿಸ್ ರದ್ದುಗೊಳಿಸಿದೆ. ಐಟಿ ಕಾಯ್ದೆ ಮತ್ತು ಸುಪ್ರೀಂ ಕೋರ್ಟ್ನ ಸತೇಂದರ್ ಕುಮಾರ್ ಆಂಟಿಲ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ ನ್ಯಾಯಾಲಯ ಆದೇಶ ನೀಡಿದೆ.
****************************
5.ಮುಸ್ಲಿಮರ ಪವಿತ್ರ ರಂಜಾನ್ ತಿಂಗಳು ಆರಂಭಕ್ಕೆ ದಿನಗಣನೆ: ಇಂದು ದರ್ಶನವಾಗದ ಚಂದ್ರ
ಕರ್ನಾಟಕದಲ್ಲಿ ರಂಜಾನ್ ತಿಂಗಳ ಆರಂಭಕ್ಕಾಗಿ ಮುಸ್ಲಿಮರ ಕಾಯುತ್ತಿದ್ದಾರೆ. ಇಂದು ಚಂದ್ರ ದರ್ಶನ ಆಗದ ಕಾರಣ, ರಾಜ್ಯಾದ್ಯಂತ ಭಾನುವಾರದಿಂದ ಉಪವಾಸ ಆರಂಭವಾಗಲಿದೆ. ಕರಾವಳಿ ಭಾಗದಲ್ಲಿ ನಾಳೆ ಚಂದ್ರ ದರ್ಶನವಾಗುವ ಸಾಧ್ಯತೆಯಿದೆ. ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಶಫಿ ಸಅದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
*****************
ಶುಭ ದಿನ