
ಮಾರ್ನಿಂಗ್ ಕ್ವಿಕ್ ನ್ಯೂಸ್ ಟೈಮ್
ಶುಭೋದಯ
ವಿಚಾರವಾದಿಯಾದವನು ಎಂದಿಗೂ ನಾಸ್ತಿಕವಾದಿಯಾಗುವುದಕ್ಕೆ ಸಾಧ್ಯವಿಲ್ಲ. ವಿಚಾರವಾದಿಯಾದವನು
ಅಜ್ಞೇಯತಾವಾದಿಯಾಗಬಹುದೆ ಹೊರತು, ಅಂದರೆ ದೇವರು ಇದ್ದಾನೊ ಇಲ್ಲವೊ ನಮಗೆ ಗೊತ್ತಿಲ್ಲ ಎನ್ನುವವನಾಗುತ್ತಾನೆ.
ಅವನು ಅಗ್ನಾಸ್ಟಿಕ್ ಆಗಬಹುದು ಹೊರತು, ಅವನು ನಾಸ್ತಿಕ ಆಗುವುದಕ್ಕೆ ಸಾಧ್ಯವಿಲ್ಲ.
– ಕುವೆಂಪು
***********************
1.ಡಿಕೆ ಶಿವಕುಮಾರ್ ಸಿಎಂ ಆಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ವೀರಪ್ಪ ಮೊಯ್ಲಿ
ಉಡುಪಿ: ರಾಜ್ಯದಲ್ಲಿ ಸಿಎಂ ಹುದ್ದೆ ಹಗ್ಗಜಗ್ಗಾಟ ಮುಂದುವರೆದಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕರೇ ಡಿಕೆ ಶಿವಕುಮಾರ್ ಸಿಎಂ ಹಾಗೇ ಆಗುತ್ತಾರೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಾರ್ಕಳದಲ್ಲಿ ಮಾಜಿ ಸಿಎಂ ವೀರಪ್ಪ ಮೊಯ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ವೀರಪ್ಪ ಮೊಯ್ಲಿ ಅವರು ಡಿಸಿಎಂ ಡಿಕೆಶಿ ಸಮ್ಮುಖದಲ್ಲಿಯೇ ಈ ಹೇಳಿಕೆ ನೀಡಿದ್ದಾರೆ. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ತೀರ್ಮಾನ ಆಗಿರುವ ವಿಷಯ. ಮೊದಲು ಡಿಕೆ ಶಿವಕುಮಾರ್ ಗೆ MLA ಟಿಕೆಟ್ ಕೊಡಿಸಿದ್ದು ನಾನೇ. ಈಗ ಅವರು ಪಕ್ಷದಲ್ಲಿ ಯಶಸ್ವಿ ನಾಯಕರಾಗಿ ಬೆಳೆದಿರುವುದು ಖುಷಿಯ ಸಂಗತಿ ಎಂದರು. ವಿನಃ ಕಾರಣ ನೀವು ಯಾವುದಕ್ಕೂ ಪ್ರತಿಕ್ರಿಯೆ ಕೊಡಬೇಡಿ. ನಿಮ್ಮ ವಿರುದ್ಧ ಹೇಳಿಕೆಗಳು ಬರುತ್ತೆ ಹೋಗುತ್ತೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ.
************************
2. ಹಕ್ಕಿ ಜ್ವರ ಎಫೆಕ್ಟ್: ಮಟನ್ ಬೆಲೆ ಕೆಜಿಗೆ 50 ರೂ ಏರಿಕೆ, ಚಿಕನ್ 20 ರೂ ಇಳಿಕೆ
ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಕ್ಕಿಜ್ವರ ಭೀತಿಯಿಂದಾಗಿ ಚಿಕನ್ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಚಿಕನ್ ಬೇಡಿಕೆ ಕುಸಿದು, ಮಾಂಸಪ್ರಿಯರು ಮಟನ್ ಮೊರೆ ಹೋಗುತ್ತಿದ್ದಾರೆ.
ರಾಜ್ಯದ ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿದ್ದು, ಬಳ್ಳಾರಿಯಲ್ಲಿ ಸೋಂಕು ಪೀಡಿತ 8 ಸಾವಿರ ಕೋಳಿಗಳನ್ನು ನಾಶಪಡಿಸಲಾಗಿದೆ. ಮಹಾರಾಷ್ಟ್ರ, ರಾಜ್ಯದ ಚಿಕ್ಕಬಳ್ಳಾಪುರ, ಬಳ್ಳಾರಿ, ಪಕ್ಕದ ರಾಯಚೂರು ಜಿಲ್ಲೆಯಲ್ಲಿ ಹಕ್ಕಿಜ್ವರ ಬಂದಿರುವುದು ಖಚಿತಪಟ್ಟಿದೆ. ಕೋಳಿ ಪಾರಂ ಗಳಲ್ಲಿ ಮಾಲೀಕರು ತೀವ್ರ ನಿಗಾ ವಹಿಸಿದ್ದಾರೆ.
**********************
3.PM Kusum ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ತಾತ್ಸಾರ: ಪ್ರಲ್ಹಾದ್ ಜೋಶಿ ತೀವ್ರ ಅಸಮಾಧಾನ
ನವದೆಹಲಿ: “ದೇವರು ವರ ಕೊಟ್ಟರೂ ಪೂಜಾರಿ ಕೊಡನು” ಎಂಬಂಥ ಪರಿಸ್ಥಿತಿ ರಾಜ್ಯದಲ್ಲಿದೆ. ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೊಳಿಸಿದ “ಪಿಎಂ ಕುಸುಮ್” ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ತೀವ್ರ ನಿರಾಸಕ್ತಿ ತೋರಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನ್ನದಾತರ ಸಬಲೀಕರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಪಿಎಂ ಕುಸುಮ್ ಯೋಜನೆ ನೀಡಿದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಅದನ್ನು ಬೆಂಬಲಿಸದೆ ರೈತರನ್ನು ವಂಚಿಸುತ್ತಿದೆ ಎಂದು ಆರೋಪಿಸಿದ್ದಾರೆ.
***********************
4.2047 ವೇಳೆಗೆ 30 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಲು ಭಾರತೀಯರು ಶ್ರಮಿಸಬೇಕು: ಅಮಿತಾಬ್ ಕಾಂತ್
ನವದೆಹಲಿ: 2047ರ ವೇಳೆಗೆ ಭಾರತವನ್ನು 30 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಭಾರತೀಯರು ಶ್ರಮಿಸಬೇಕು ಎಂದು ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.
ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು ಎನ್ನುವ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ಭಾಗವಹಿಸಿದ ಜಿ20 ಭಾರತೀಯ ನಿಯೋಗದ ಮುಖ್ಯಸ್ಥ (ಶೆರ್ಪಾ), ಜಪಾನ್, ದಕ್ಷಿಣ ಕೊರಿಯಾ ಮತ್ತು ಚೀನಾ ದೇಶಗಳು ಬಲಿಷ್ಠವಾದ ಕೆಲಸದ ನೀತಿಯ ಮೂಲಕ ಆರ್ಥಿಕ ಯಶಸ್ಸನ್ನು ಸಾಧಿಸಿವೆ ಮತ್ತು ವಿಶ್ವ ದರ್ಜೆಯ ಆರ್ಥಿಕತೆಯನ್ನು ನಿರ್ಮಿಸಲು ಭಾರತವು ಇದೇ ರೀತಿಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
*********************
5.ತ್ರಿಭಾಷಾ ಸೂತ್ರದಿಂದ ಮಾತೃಭಾಷೆಯ ಕಡೆಗಣನೆ: PAFRE
ಬೆಂಗಳೂರು: ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಪೀಪಲ್ಸ್ ಅಲೈಯನ್ಸ್ ಫಾರ್ ಫಂಡಮೆಂಟಲ್ ರೈಟ್ ಟು ಎಜುಕೇಶನ್ (PAFRE) ಬಲವಾಗಿ ವಿರೋಧಿಸಿದೆ. ಇದು ಮಕ್ಕಳ ಮಾತೃಭಾಷೆ ಕಲಿಕೆಯನ್ನು ದುರ್ಬಲಗೊಳಿಸುವುದಲ್ಲದೆ ಸೃಜನಶೀಲ ಕಲಿಕೆಗೆ ಅಡ್ಡಿಯುಂಟುಮಾಡುತ್ತದೆ ಎಂದು ವಾದಿಸಿದೆ. ಭಾಷಾ ವೈವಿಧ್ಯತೆಯನ್ನು ಗೌರವಿಸುವ ಮತ್ತು ರಾಜ್ಯಗಳಾದ್ಯಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆಯನ್ನು ಖಚಿತಪಡಿಸುವ ಬಹುಭಾಷಾ ಶಿಕ್ಷಣ ನೀತಿಗೆ ಬದಲಾಯಿಸಬೇಕೆಂದು ಸಂಘಟನೆ ಒತ್ತಾಯಿಸಿದೆ.
***********************