
ಶುಭೋದಯ
ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ.
ಆದರೆ ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.
— ಸ್ವಾಮಿ ವಿವೇಕಾನಂದ
************************
1.ಮಣಿಪುರದ ಕುಕಿ-ಝೋ ಪ್ರದೇಶಗಳಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕೊಡಲ್ಲ: ಸರ್ಕಾರದ ವಿರುದ್ಧ ತೊಡೆತಟ್ಟಿದ ಬುಡಕಟ್ಟು ಸಂಘಟನೆ!
ಗುವಾಹಟಿ: ಮಣಿಪುರದ ಕುಕಿ-ಝೋ ಸಂಘಟನೆಯ ಬುಡಕಟ್ಟು ಏಕತೆ ಸಮಿತಿ (COTU), ಸಮುದಾಯದ ಬೇಡಿಕೆಗಳನ್ನು ಗೌರವಿಸುವ ನಿರ್ಣಯವನ್ನು ತೆಗೆದುಕೊಳ್ಳುವವರೆಗೂ ಕುಕಿ-ಝೋ ಪ್ರದೇಶಗಳಲ್ಲಿ ಯಾವುದೇ ಮುಕ್ತ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದೆ.
ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಎಂಟು ಅಂಶಗಳ ನಿರ್ಣಯ’ದ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಾರ್ಚ್ 8ರಿಂದ ಮಣಿಪುರದ ಎಲ್ಲಾ ರಸ್ತೆಗಳಲ್ಲಿ ಜನರಿಗೆ ಮುಕ್ತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭದ್ರತಾ ಸಂಸ್ಥೆಗಳಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ಮಾರ್ಚ್ 1ರಂದು ನವದೆಹಲಿಯಲ್ಲಿ ಮಣಿಪುರ ಭದ್ರತಾ ಪರಿಸ್ಥಿತಿಯ ಕುರಿತು ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾ, ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುವ ಯಾರಾದರೂ ಸಹ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದರು.
**************************************
2. ಭಾರತದ ನಂಬರ್ 1 ಫೀಲ್ಡರ್ ಕೊಹ್ಲಿ; ಗೋಡೆ ದಾಖಲೆ ಉಡೀಸ್
Virat Kohli Surpasses Dravid: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತಿ ಹೆಚ್ಚು ಕ್ಯಾಚ್ಗಳನ್ನು (335) ಹಿಡಿದ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಅವರು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ. ವಿರಾಟ್ ಈಗ ಭಾರತದಲ್ಲಿ ಎಲ್ಲಾ ಸ್ವರೂಪಗಳಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
****************************************
3. ಮುಡಾ ಪ್ರಕರಣ: ಪಟ್ಟು ಸಡಿಲಿಸದ ಸ್ನೇಹಮಯಿ ಕೃಷ್ಣ ಮತ್ತೆ ಕೋರ್ಟ್ ಮೊರೆ
ಮುಡಾ ಹಗರಣ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ಈಗಾಗಲೇ ಹೈಕೋರ್ಟ್ ವಜಾ ಮಾಡಿದೆ. ಆದರೂ ಪಟ್ಟು ಬಿಡದ ಸ್ನೇಹಮಯಿ ಕೃಷ್ಣ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಬೇಕೆಂದು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರನ್ನು ಚಿಂತೆಗೀಡು ಮಾಡಿದ್ದಾರೆ.
************************************
4.ಸ್ವಇಚ್ಛೆಯಿಂದ ಫಲಾನುಭವಿಗಳು ಗ್ಯಾರಂಟಿ ಬಿಟ್ಟುಕೊಟ್ಟರೇ ಅದಕ್ಕೆ ವ್ಯವಸ್ಥೆ ಮಾಡುತ್ತೇವೆ: ಸಚಿವ ಎಚ್ಎಂ ರೇವಣ್ಣ
ನವದೆಹಲಿ: ಕೆಲವೆಡೆ ಮಹಿಳೆಯರು ನಮಗೆ ಗ್ಯಾರಂಟಿ ಯೋಜನೆಗಳು ಬೇಡ. ಅದು ಬಡವರಿಗೆ ತಲುಪಬೇಕೆಂದು ತಿಳಿಸಿದ್ದಾರೆ. ಹಾಗಾಗಿ ಸ್ವಇಚ್ಛೆಯಿಂದ ಗ್ಯಾರಂಟಿ ಬಿಟ್ಟು ಕೊಡುವ ವ್ಯವಸ್ಥೆ ತರುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್ ಎಂ ರೇವಣ್ಣ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ಯಾರಂಟಿ ಅನುಷ್ಠಾನದ ಬಗ್ಗೆ ಕಾಂಗ್ರೆಸ್ ನಾಯಕರಾದ ಕೆಸಿ ವೇಣುಗೋಪಾಲ್, ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಮಾಹಿತಿ ನೀಡಿದ್ದೇನೆ. ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವ ಬಿಜೆಪಿ ನಾಯಕರು, ಬಡವರಿಗೆ ಬಾಯಿ ಇಲ್ಲ ಅದಕ್ಕೆ ಮಾತನಾಡಲ್ಲ ಎಂದು ಹೇಳುತ್ತಾರೆ. ಆದರೆ ನಾವು ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದರು. ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಖಾತರಿಗಳನ್ನು ಜಾರಿಗೆ ತರಲಾಗಿತ್ತು ಎಂದು ರೇವಣ್ಣ ಹೇಳಿದರು.
*********************************
5.ಚಿಕ್ಕಮಗಳೂರಿನಲ್ಲಿ ಮತ್ತೆ ಮುನ್ನಲೆಗೆ ಬಂದ ಜಾಮಿಯಾ ಮಸೀದಿ-ನೆಲ್ಲೂರು ಮಠ ನಡುವಿನ ಜಾಗ ವಿವಾದ
ನೆಲ್ಲೂರು ಮಠ – ಜಾಮಿಯಾ ಮಸೀದಿ ನಡುವಿನ ಎರಡು ದಶಕದ ಕಾನೂನು ಹೋರಾಟ. ಕಾನೂನು ಹೋರಾಟದ ನಡುವೆಯೂ ಇಂದು ಬೆಳ್ಳಂಬೆಳಗ್ಗೆ ಏಕಾಏಕಿ ಜಾಮಿಯಾ ಮಸೀದಿ ಕಮಿಟಿ ವಿವಾದಿತ ಸ್ಥಳದಲ್ಲಿದ್ದ ಮನೆ ಮತ್ತು ಅಂಗಡಿಗಳನ್ನ ತೆರವುಗೊಳಿಸಿದ್ದು. ಕೆಡವಿದ ಜಾಗದಲ್ಲೇ ಮತ್ತೆ ಮನೆ ಮತ್ತು ಅಂಗಡಿ ಕಟ್ಟಿ ಕೊಡಿ ಇಲ್ಲ ನಾವೇ ಕಟ್ತೀವಿ ಎಂದು ಬಿಜೆಪಿ ಹಾಗೂ ಹಿಂದೂ ಪರ ಸಂಘಟನೆಗಳು ಸವಾಲ್ ಹಾಕಿ ತೊಡೆ ತಟ್ಟಿದೆ.
ನಗರದ ಹೃದಯ ಭಾಗದಲ್ಲಿರುವ ಜಾಗಕ್ಕೆ ನೆಲ್ಲೂರು ಮಠದ ಮನೆ ಮತ್ತು ಜಾಮಿಯಾ ಮಸೀದಿ ನಡುವೆ ಹಗ್ಗಜಗ್ಗಾಟ ನಡೆದಿದ್ದು, ಇದೀಗ ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಜಾಗದ ವಿಚಾರವಾಗಿ ಜಾಮಿಯಾ ಮಸೀದಿ ಮತ್ತು ನೆಲ್ಲೂ ಮಠದ ನಡುವೆ ಕಳೆದ ಎರಡು ದಶಕಗಳಿಂದ ಕಾನೂನು ಹೋರಾಟ ನಡೆಯುತ್ತಿದೆ. ಆದ್ರೆ ಇದರ ನಡುವೆ ಹೈಕೋರ್ಟ್ ನಲ್ಲಿ ತಮ್ಮ ಪರವಾಗಿ ಆದೇಶ ಬಂದಿದೆ ಎಂದು ಹೇಳಿಕೊಂಡು ಇಂದು (ಮಾರ್ಚ್ 04) ಬೆಳ್ಳಂಬೆಳಗ್ಗೆ ಜಾಮಿಯಾ ಮಸೀದಿ ಕಮಿಟಿ ಸುಮಾರು 200 ಹೆಚ್ಚು ಯುವಕರೊಂದಿಗೆ ಬಂದು ಏಕಾಏಕಿ ವಿವಾದಿತ ಮಠದ ಮನೆಯ ಜಾಗದಲ್ಲಿದ್ದ ಮನೆ ಮತ್ತು ಅಂಗಡಿಯನ್ನ ನೆಲಸಮ ಮಾಡಿದೆ. ಇದು ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಆಕ್ರೊಶಕ್ಕೆ ಕಾರಣವಾಗಿದೆ.
*******************************