ಶುಭೋದಯ
ನಮ್ಮ ದೇಹ ಕೂಡಾ ಒಂದು ರಥ.
ಅಂತಹ ರಥದಲ್ಲಿ ಜೀವನನ್ನು ನಡೆಸುವ ಭಗವಂತನ ಸನ್ನಿಧಾನವಿದೆ.
ನಾಲ್ಕು ಕುದುರೆಗಳೆಂದರೆ ನಾಲ್ಕು ವೇದಗಳು.
ಬಿಳಿ ಬಣ್ಣ ಸತ್ವ ಗುಣದ ಸಂಕೇತ
-
– ಭಗವದ್ಗೀತೆ
******************************************************
1.ಗಡಿಯಲ್ಲಿ ಕಳ್ಳಸಾಗಣೆ ಯತ್ನ ವಿಫಲ: ಬಾಂಗ್ಲಾದೇಶದ ಓರ್ವ ಪ್ರಜೆಯ ಹತ್ಯೆ- BSF
ಡಾರ್ಜಿಲಿಂಗ್: ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಡಿ ರಕ್ಷಣಾ ಪಡೆ ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಿದ್ದರಿಂದ ಬಾಂಗ್ಲಾದೇಶದ ಪ್ರಜೆಯೊಬ್ಬ ಸಾವನ್ನಪ್ಪಿದ್ದು, ಗಡಿ ಭದ್ರತಾ ಪಡೆ ಯೋಧ ಗಾಯಗೊಂಡಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಡಾರ್ಜಿಲಿಂಗ್ ಜಿಲ್ಲೆಯ ಖಲ್ಪಾರಾ ಗ್ರಾಮದ ಬಳಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. 15-20 ಬಾಂಗ್ಲಾದೇಶಿ ದುಷ್ಕರ್ಮಿಗಳಿದ್ದ ಗುಂಪೊಂದು ಅಕ್ರಮವಾಗಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದ ಭೂಪ್ರದೇಶದೊಳಗೆ ಪ್ರವೇಶಿಸಿದೆ.
ಈ ಗುಂಪಿಗೆ ಭಾರತದ ಕಡೆಯಿಂದ ಜಾನುವಾರ ಸಾಗಿಸಲು ಯತ್ನಿಸುತ್ತಿದ್ದ ದುಷ್ಕರ್ಮಿಗಳು ಸೇರಿಕೊಂಡಿದ್ದರು ಎಂದು ಬಿಎಸ್ ಎಫ್ ವಕ್ತಾರರು ವಕ್ತಾರರು ತಿಳಿಸಿದ್ದಾರೆ.

********************************************************
2.ಬೆಂಗಳೂರು: ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನ, 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ‘ಹಿಮಾ’ ‘ಅರುಣ್ಯ’!
ಬೆಂಗಳೂರು: ಫೆಬ್ರವರಿ 14ರಂದು ಆರು ವರ್ಷದ ‘ಹಿಮಾ’ ಹೆಸರಿನ ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಕಟಿಸಿದೆ.
ಅಧಿಕಾರಿಗಳ ಪ್ರಕಾರ, ‘ಹಿಮಾ’ 2024ರ ಜೂನ್ ನಲ್ಲಿ ತನ್ನ ಮೊದಲ ಮರಿಗಳಿಗೆ ಜನ್ಮ ನೀಡಿತು. ಇದೀಗ ಎರಡನೇ ಬಾರಿಗೆ ಮರಿಗಳನ್ನು ಹಾಕಿದೆ. ತಾಯಿ ಮತ್ತು ಮರಿಗಳು ಎರಡೂ ಆರೋಗ್ಯವಾಗಿವೆ.
ಫೆಬ್ರವರಿ 16ರಂದು ‘ಅರುಣ್ಯ’ ಹೆಸರಿನ ಹುಲಿ ಮೊದಲ ಬಾರಿಗೆ ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮರಿಗಳನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಚೆನ್ನೈನ ಅರಿಗ್ನಾರ್ ಅನ್ನಾ ಪ್ರಾಣಿಶಾಸ್ತ್ರ ಉದ್ಯಾನವನದಿಂದ ತರಿಸಿಕೊಳ್ಳಲಾಗಿತ್ತು. ತಾಯಿ ಮತ್ತು ಮರಿಗಳು ಎರಡೂ ಆರೋಗ್ಯವಾಗಿವೆ ಎಂದು ಜೈವಿಕ ಉದ್ಯಾನವನವು ಹೇಳಿಕೆಯಲ್ಲಿ ತಿಳಿಸಿದೆ.

******************************************************
3. 11 ವರ್ಷಗಳಲ್ಲಿ ಪ್ರಧಾನಿ 11 ದೊಡ್ಡ ಸುಳ್ಳುಗಳನ್ನು ಹೇಳಿದ್ದಾರೆ: ಪ್ರಧಾನಿ ಮೋದಿ ವಿರುದ್ಧ ಖರ್ಗೆ ಘರ್ಜನೆ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ. ಹನ್ನೊಂದು ವರ್ಷಗಳ ಅಧಿಕಾರದಲ್ಲಿ ಹನ್ನೊಂದು ದೊಡ್ಡ ಸುಳ್ಳುಗಳನ್ನು ದೇಶಕ್ಕೆ ಹೇಳಿದ್ದಾರೆ ಎಂದು ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.
ಕಲ್ಯಾಣ ಕರ್ನಾಟಕದ 38 ಗ್ರಾಮೀಣ ಕ್ಷೇತ್ರಗಳಲ್ಲಿ 1,166 ಕಿ.ಮೀ ರಸ್ತೆಗಳನ್ನು ನಿರ್ಮಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದ್ದು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಮಾದರಿಯಲ್ಲಿ ಈ ಯೋಜನೆಯನ್ನು 1,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಜೇವರ್ಗಿಯಲ್ಲಿ ಕಲ್ಯಾಣ ಪಥ ಯೋಜನೆಯನ್ನು ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮೋದಿ ಅವರ ಭರವಸೆಗಳನ್ನು ಟೀಕಿಸಿದರು. ಹನ್ನೊಂದು ವರ್ಷಗಳಲ್ಲಿ ಮೋದಿ ಹನ್ನೊಂದು ದೊಡ್ಡ ಸುಳ್ಳುಗಳನ್ನು ಹೇಳಿದ್ದಾರೆ. ಮೊದಲ ಸುಳ್ಳು ಎಂದರೆ ವಿದೇಶದಿಂದ ಕಪ್ಪು ಹಣವನ್ನು ತಂದು ಜನರ ಬ್ಯಾಂಕ್ ಖಾತೆಗಳಿಗೆ ತಲಾ 15 ಲಕ್ಷ ರೂ. ಹಾಕುವುದು. ಎರಡನೇಯ ಸುಳ್ಳು ಎಂದರೆ ಪ್ರತಿ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದು. ಆದರೆ ಉದ್ಯೋಗ ಸೃಷ್ಟಿ ಆಗಿದೆಯಾ? ಆದರೂ ನಮ್ಮ ಯುವಕರು ಮೋದಿಯನ್ನು ಏಕೆ ಬೆಂಬಲಿಸುತ್ತಾರೆ ಅಂತ ನನಗೆ ಇನ್ನೂ ತಿಳಿದಿಲ್ಲ? ಅವರು ಜಾತಿ, ಧರ್ಮ, ನಡವಳಿಕೆಯ ಆಧಾರದ ಮೇಲೆ ಅವರನ್ನು ಬೆಂಬಲಿಸುತ್ತಾರಾ ನನಗೆ ಅರ್ಥವಾಗುತ್ತಿಲ್ಲ ಎಂದು ಖರ್ಗೆ ಹೇಳಿದರು.

**************************************************
4. ಬಿಜೆಪಿ ಪರ ಕೆಲಸ ಮಾಡುವ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ವಾರ್ನಿಂಗ್!
ಅಹಮದಾಬಾದ್: ಬಿಜೆಪಿ ಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರಿಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಪರ ಕೆಲಸ ಮಾಡುತ್ತಿರುವ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಪಕ್ಷದಿಂದ ಹೊರಗಿಡುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಗುಜರಾತ್ ಭೇಟಿಯ ಎರಡನೇ ದಿನವಾದ ಇಂದು ಅಹಮದಾಬಾದ್ ನಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಲ್ಲಿರುವ ಎರಡು ಗುಂಪುಗಳನ್ನು ಬೇರ್ಪಡಿಸುವುದು ಪಕ್ಷದ ಮೊದಲ ಕೆಲಸ ಎಂದರು.
ಕಾಂಗ್ರೆಸ್ ನ ಸಿದ್ದಾಂತವನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು, ಸದಾ ಸಾರ್ವಜನಿಕರೊಂದಿಗೆ ನಿಲ್ಲುವವರು ಒಂದು ಗುಂಪಿನಲ್ಲಿದ್ದಾರೆ. ಸಾರ್ವಜನಿಕರಿಂದ ಸಂಪರ್ಕ ಕಡಿದುಕೊಂಡ ಮತ್ತೊಂದು ಗುಂಪು ಬಿಜೆಪಿ ಜೊತೆಗಿದ್ದಾರೆ ಎಂದು ಹೇಳಿದರು.
ಕಠಿಣ ಕ್ರಮ ಕೈಗೊಂಡರೂ ಸಹ ಅಂತಹ ನಾಯಕರನ್ನು ಪಕ್ಷದಿಂದ ಹೊರಗಿಡುವುದು, ಈ ಗುಂಪುಗಳನ್ನು ಬೇರ್ಪಡಿಸುವುದು ಪಕ್ಷದ ಮೊದಲ ಕೆಲಸವಾಗಬೇಕು. ಈ ಗುಂಪುಗಳು ಬೇರೆ ಬೇರೆಯಾಗುವವರೆಗೂ ಗುಜರಾತ್ ಜನರು ಪಕ್ಷವನ್ನು ನಂಬುವುದಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.

**********************************************************
5. ಮೊದಲ ಬಾರಿ ಕೊಲೆ ಮಾಡುವ ಮಹಿಳೆಯರಿಗೆ ಕಾನೂನಿನಲ್ಲಿ ಶಿಕ್ಷೆಯಿಂದ ವಿನಾಯಿತಿ ಕೊಡಿ- ರಾಷ್ಟ್ರಪತಿಗಳಿಗೆ NCP ವಿಚಿತ್ರ ಬೇಡಿಕೆ!
ನವದೆಹಲಿ: ಮಹಿಳೆಯರು ಮೊದಲ ಬಾರಿ ಕೊಲೆ ಮಾಡಿದರೆ ಅವರಿಗೆ ಕಾನೂನಲ್ಲಿ ಶಿಕ್ಷೆಯಿಂದ ವಿನಾಯಿತಿ ನೀಡಲು ಒಪ್ಪಿಗೆ ಸೂಚಿಸುವಂತೆ NCP ಪಕ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ವಿಚಿತ್ರ ಬೇಡಿಕೆ ಸಲ್ಲಿಸಿವೆ.
NCP ಪಕ್ಷದ ಮಹಿಳಾ ಘಟಕ ಈ ರೀತಿಯ ವಿಚಿತ್ರ ಬೇಡಿಕೆ ಮುಂದಿಟ್ಟಿದ್ದು, ತನ್ನನ್ನು ತಾನು ರಕ್ಷಿಸಿಕೊಳ್ಳುವುದಕ್ಕಾಗಿ ಮಹಿಳೆಯರು ಮೊದಲ ಬಾರಿಗೆ ಕೊಲೆ ಮಾಡಿದರೆ ಅಂತಹವರಿಗೆ ಶಿಕ್ಷೆ ಕೊಡಬಾರದು, ಶಿಕ್ಷೆಯಿಂದ ವಿನಾಯಿತಿ ನೀಡಬೇಕೆಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದೆ.


