
ಶುಭೋದಯ
ಧರ್ಮ ಎನ್ನುವುದು ಲೋಕದ ಹಿತಕ್ಕಾಗಿಯೇ ಹೊರತು ;
ಲೋಕ ಧರ್ಮದ ಹಿತಕ್ಕಾಗಿ ಅಲ್ಲ.
–ಡಿ.ವಿ.ಜಿ
*******************************************************
1.ಮಾರಿಷಸ್ ಮಿನಿ ಭಾರತವಿದ್ದಂತೆ; ಪ್ರಧಾನಿ ಮೋದಿ ಭಾಷಣ
ಭಾರತವು ಮಾರಿಷಸ್ನ ಬೆಳವಣಿಗೆಯಿಂದ ಪ್ರಯೋಜನ ಪಡೆಯಬೇಕೆಂದು ನಾವು ಬಯಸುತ್ತೇವೆ ಎಂದು ಪ್ರಧಾನಿ ಮೋದಿ ಪೋರ್ಟ್ ಲೂಯಿಸ್ನಲ್ಲಿರುವ ಭಾರತೀಯ ಸಮುದಾಯಕ್ಕೆ ಹೇಳಿದ್ದಾರೆ. ಮಾರಿಷಸ್ಗೆ ಅಧಿಕೃತ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಪೋರ್ಟ್ ಲೂಯಿಸ್ನಲ್ಲಿರುವ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು. “ನಾನು ನಿಮ್ಮನ್ನು ಕೈಜೋಡಿಸಿ ಸ್ವಾಗತಿಸುತ್ತೇನೆ. ನಾನು 10 ವರ್ಷಗಳ ಹಿಂದೆ ಇದೇ ದಿನಾಂಕದಂದು ಮಾರಿಷಸ್ಗೆ ಬಂದಿದ್ದೆ. ಈ ಬಾರಿ, ನಾನು ಹೋಳಿಯ ಬಣ್ಣಗಳನ್ನು ನನ್ನೊಂದಿಗೆ ಭಾರತಕ್ಕೆ ತೆಗೆದುಕೊಂಡು ಹೋಗುತ್ತೇನೆ” ಎಂದು ಪ್ರಧಾನಿ ಮೋದಿ ಮಾರಿಷಸ್ನಲ್ಲಿರುವ ಭಾರತೀಯ ಸಮುದಾಯಕ್ಕೆ ಹೇಳಿದರು.
*************************************************************
2.ಬೇಸರವಾಗಿದ್ದರೆ ಕ್ಷಮಿಸಿ; ರಾಜ್ಯಸಭೆಯಲ್ಲಿ ಅಸಂಸದೀಯ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚನೆ
ಕೇಂದ್ರ ಸರ್ಕಾರದ ಬಜೆಟ್ ಅಧಿವೇಶನದ ಎರಡನೇ ಹಂತದ ಸಂದರ್ಭದಲ್ಲಿ ಇಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗಳು ಮೇಲ್ಮನೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಹೊಸ ಶಿಕ್ಷಣ ನೀತಿ (ಎನ್ಇಪಿ) ಕುರಿತು ನಡೆಯುತ್ತಿರುವ ಭಾಷಾ ವಿವಾದದ ಕುರಿತು ನಾಯಕರು ಚರ್ಚೆ ನಡೆಸುತ್ತಿದ್ದಾಗ ಮಲ್ಲಿಕಾರ್ಜುನ ಖರ್ಗೆ ಮೇಲೆದ್ದು ನಿಂತು ಮಾತನಾಡಿದ್ದಾರೆ. ಈ ವೇಳೆ ರಾಜ್ಯಸಭಾ ಪೀಠಾಧ್ಯಕ್ಷರ ಸೀಟ್ ಕಡೆ ಬೆರಳು ಮಾಡಿ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ನಾವು ಮಾತನಾಡಲು ತಯಾರಿ ಮಾಡಿಕೊಂಡು ಬಂದಿದ್ದೇವೆ,ಆದರೆ ನೀವು ಬೇರೆ ಏನೋ ಬಯಸುತ್ತಿದ್ದೀರಿ ಎಂದು ಖರ್ಗೆ ಆಕ್ರೋಶ ಹೊರಹಾಕಿದ್ದರು. ಆದರೆ, ಖರ್ಗೆ ಮಾತಿಗೆ ಉಪಸಭಾಪತಿ ಹರಿವಂಶ್ ಹಾಗೂ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಸಾಂವಿಧಾನಿಕ ಪದ ಬಳಕೆ ಮಾಡಿದ್ದಾರೆ ಎಂದು ಆಡಳಿತ ಪಕ್ಷ ಗದ್ದಲ ಮಾಡಿದ್ದರು. ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಲ್ಲಿಕಾರ್ಜುನ ಖರ್ಗೆ ಕ್ಷಮೆ ಕೇಳಿದ್ದಾರೆ.
**************************************************************
3.ಗ್ಯಾರಂಟಿ ಅನುಷ್ಟಾನ ಸಮಿತಿಗೆ ಕಾಂಗ್ರೆಸ್ ಕಾರ್ಯಕರ್ತರ ನೇಮಕ: ವಿಧಾನಸಭೆಯಲ್ಲಿ ವಿಪಕ್ಷಗಳ ಗದ್ದಲ, ಕೋಲಾಹಲ!
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಅನುಷ್ಟಾನದ ಮೇಲ್ವಿಚಾರಣೆಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಿಸುವ ಮೂಲಕ ಸರ್ಕಾರ ಶಾಸಕರ ಅಧಿಕಾರವನ್ನು ಮೊಟಕುಗೊಳಿಸಿದೆ ಎಂದು ಆರೋಪಿಸಿದ ಪ್ರತಿಪಕ್ಷಗಳು, ಈ ಪಕ್ಷದ ಕಾರ್ಯಕರ್ತರಿಗೆ ಗೌರವಧನ ನೀಡಲು ರಾಜ್ಯದ ಬೊಕ್ಕಸದಿಂದ ಹಣವನ್ನು ಬಳಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದವು. ಈ ಎಲ್ಲ ಸಮಿತಿಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟೊಸಿ ಧರಣಿ ನಡೆಸಿ, ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ವಿಧಾನಸಭೆಯಲ್ಲಿಂದು ಅಕ್ಷರಶ: ಕೋಲಾಹಲ ಉಂಟಾಯಿತು. ಪ್ರತಿಪಕ್ಷಗಳ ಬೇಡಿಕೆಯನ್ನು ಸಚಿವ ಸಂಪುಟದಲ್ಲಿ ಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭರವಸೆ ನೀಡಿದರು.
******************************************************************
4.ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ವಿವಿ: ಮರು ನಾಮಕರಣ ಮಸೂದೆ ವಿಧಾನಸಭೆಯಲ್ಲಿ ಮಂಡನೆ
ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವನ್ನು ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡುವ ಮಸೂದೆಯನ್ನು ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು. 2016 ರ ಕಾಯಿದೆಯನ್ನು ಮತ್ತಷ್ಟು ತಿದ್ದುಪಡಿ ಮಾಡುವ ‘ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ (ತಿದ್ದುಪಡಿ) ಮಸೂದೆ, 2025’ ನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ಪ್ರಸ್ತಾವಿತ ಶಾಸನೀಯ ಕ್ರಮವು ಯಾವುದೇ ಹೆಚ್ಚುವರಿ ವೆಚ್ಚವನ್ನು ಹೊಂದಿರುವುದಿಲ್ಲ ಎಂದು ಮಸೂದೆಯಲ್ಲಿ ಹೇಳಲಾಗಿದೆ.
************************************************************
5.ಮತ್ತೆ ಹೆಚ್ಚಾಗಲಿದೆ ಮದ್ಯದ ದರ: ಎಣ್ಣೆ ಪ್ರಿಯಕರಿಗೆ 3ನೇ ಬಾರಿಗೆ ಅಬಕಾರಿ ಇಲಾಖೆ ಶಾಕ್..!
Liquor Price Hike: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಐಎಂಎಲ್ ಗಳ ಮೇಲಿನ ದರವನ್ನು ಹೆಚ್ಚಳ ಮಾಡಿತ್ತು. ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರುಪಾಯಿ ಟಾರ್ಗೆಟ್ ನೀಡಿದ್ದು, ಹೊಸ ಟಾರ್ಗೆಟ್ ರೀಚ್ ಮಾಡಲು ಇದೀಗ ಮೂರನೇ ಬಾರಿ ದರ ಹೆಚ್ಚಳ ಮಾಡಲು ಅಬಕಾರಿ ಇಲಾಖೆ ಪ್ಲಾನ್ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಮದ್ಯಪ್ರಿಯರು ಹಾಗೂ ಬಾರ್ ಮಾಲೀಕರು ಆಕ್ರೋಶಗೊಂಡಿದ್ದಾರೆ.
*************************************************************
ಶುಭದಿನ