
ಶುಭೋದಯ
ಕೊಟ್ಟು ಕೆಟ್ಟವರಿಲ್ಲ , ತಿಂದು ಬದುಕಿದವರಿಲ್ಲ
ಕೊಟ್ಟು ಕದಿಯಲು ಬೇಡ ,ಕೊಟ್ಟಾಡಿಕೊಳಬೇಡ.
– ಸರ್ವಜ್ಞ
*****************************************************
1.ತಂದೆ-ತಾಯಿ ಹಾಗೂ ಹಿರಿಯರ ಆರೈಕೆ ಮಾಡದಿದ್ರೆ ಆಸ್ತಿಯಲ್ಲಿ ಪಾಲಿಲ್ಲ: ಕೃಷ್ಣ ಬೈರೇಗೌಡ
ಇತ್ತೀಚೆಗೆ ಕೆಲ ಮಕ್ಕಳ ತಮ್ಮ ವಯಸ್ಸಾದ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಬದಲಾಗಿ ಅವರನ್ನು ಅನಾಥ ಆಶ್ರಮಗಳಿಗೆ ಕಳುಸಿದ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಸಂಬಂಧ ಕುಟುಂಬದಲ್ಲಿನ ಹಿರಿಯ ರಕ್ಷಣೆಗೆ ಸಂಬಂಧ ಇಂದು ಕರ್ನಾಟಕ ವಿಧಾನಪರಿಷತ್ನಲ್ಲಿ ಪ್ರಸ್ತಾಪವಾಗಿದ್ದು, ಇದಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯಿಸಿ ತಂದೆ-ತಾಯಿ, ಹಿರಿಯರನ್ನ ಆರೈಕೆ ಮಾಡದಿದ್ರೆ ಅವರ ಆಸ್ತಿಯಲ್ಲಿ ಪಾಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
******************************************************************************
2.ಬಿಟ್ಟುಬಿಡೋ ಮಾತೇ ಇಲ್ಲ: ಸಂಭಾಲ್ ಇತಿಹಾಸ ಇಸ್ಲಾಂಗಿಂತ ಹಿಂದಿನದು, ಅಲ್ಲಿ ವಿಷ್ಣು ದೇವಾಲಯ ಕೆಡವಲಾಗಿತ್ತು- ಯೋಗಿ ಆದಿತ್ಯನಾಥ್
ಲಖನೌ: ಸಂಭಾಲ್ನಲ್ಲಿ ಮಸೀದಿ ವಿವಾದದ ಮಧ್ಯೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂಭಾಲ್ ಅನ್ನು 5,000 ವರ್ಷಗಳಷ್ಟು ಹಳೆಯದಾದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದು ಇಸ್ಲಾಂ ಧರ್ಮಕ್ಕೂ ಹಿಂದಿನದು ಎಂದು ಹೇಳಿದ್ದಾರೆ. 1526ರಲ್ಲಿ ಸಂಭಾಲ್ನಲ್ಲಿರುವ ಶ್ರೀ ಹರಿ ವಿಷ್ಣು ದೇವಾಲಯವನ್ನು ನೆಲಸಮಗೊಳಿಸಲಾಯಿತು ಎಂದು ಆದಿತ್ಯನಾಥ್ ಹೇಳಿದ್ದಾರೆ. 5,000 ವರ್ಷಗಳಷ್ಟು ಹಳೆಯ ಗ್ರಂಥಗಳಲ್ಲಿ ಸಂಭಾಲ್ ಅನ್ನು ಉಲ್ಲೇಖಿಸಲಾಗಿದೆ. ಅವು ವಿಷ್ಣುವಿನ ಭವಿಷ್ಯದ ಅವತಾರವನ್ನು ಉಲ್ಲೇಖಿಸುತ್ತವೆ. ಮತ್ತೊಂದೆಡೆ, ಇಸ್ಲಾಂ ಕೇವಲ 1,400 ವರ್ಷಗಳ ಹಿಂದೆ ಹುಟ್ಟಿಕೊಂಡಿತು. ನಾನು ಇಸ್ಲಾಂಗಿಂತ ಕನಿಷ್ಠ 2,000 ವರ್ಷ ಹಳೆಯದಾದ ವಿಷಯದ ಬಗ್ಗೆ ಮಾತನಾಡುತ್ತಿದ್ದೇನೆ ಎಂದರು.
****************************************************************************
3.Tirumala: ತಿರುಪತಿ ಅನ್ನಪ್ರಸಾದ ಟ್ರಸ್ಟ್ಗೆ ಬರೋಬ್ಬರಿ 2,200 ಕೋಟಿ ದೇಣಿಗೆ!
ತಿರುಮಲ: ತಿರುಮಲ ತಿರುಪತಿ ದೇವಸ್ಥಾನ (TTD) ಅತ್ಯಂತ ಪ್ರತಿಷ್ಠೆಯಿಂದ ನಡೆಸುತ್ತಿರುವ ಉಚಿತ ಅನ್ನಪ್ರಸಾದ ಟ್ರಸ್ಟ್ಗೆ ದೇಣಿಗೆ 2,200 ಕೋಟಿ ರೂ.ಗಳನ್ನು ದಾಟಿದೆ ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹೇಳಿದರು. 1985ರಲ್ಲಿ ಆಗಿನ ಮುಖ್ಯಮಂತ್ರಿ ಎನ್ ಟಿ ರಾಮರಾವ್ ತಿರುಮಲದಲ್ಲಿ ಅನ್ನದಾನ ಯೋಜನೆಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಇದನ್ನು ವೆಂಕಟೇಶ್ವರ ನಿತ್ಯ ಅನ್ನದಾನ ದತ್ತಿ ಯೋಜನೆ ಎಂದು ಹೆಸರಿಸಲಾಗಿತ್ತು. 1994ರಲ್ಲಿ ಸ್ವತಂತ್ರ ಟ್ರಸ್ಟ್ ಆದ ನಂತರ ಟ್ರಸ್ಟ್ನ ಹೆಸರನ್ನು ಶ್ರೀ ವೆಂಕಟೇಶ್ವರ ನಿತ್ಯ ಅನ್ನದಾನಂ ಟ್ರಸ್ಟ್ ಎಂದು ಬದಲಾಯಿಸಲಾಯಿತು. 2014ರಲ್ಲಿ ಟ್ರಸ್ಟ್ನ ಹೆಸರನ್ನು ಶ್ರೀ ವೆಂಕಟೇಶ್ವರ ಅನ್ನಪ್ರಸಾದಂ ಟ್ರಸ್ಟ್ ಎಂದು ಬದಲಾಯಿಸಲಾಯಿತು. ಈ ಮೆಗಾ ಉಚಿತ ಆಹಾರ ಯೋಜನೆಗೆ ಪ್ರಪಂಚದಾದ್ಯಂತದ ದೇಣಿಗೆಗಳಿಂದ ಹಣಕಾಸು ಒದಗಿಸಲಾಗುತ್ತಿದೆ.
************************************************************************
4.ಜಮ್ಮು ಮತ್ತು ಕಾಶ್ಮೀರ: ರಜೌರಿಯ ಎಲ್ಒಸಿ ಬಳಿ ಶಂಕಿತ ಸ್ನೈಪರ್ ದಾಳಿ, ಯೋಧನಿಗೆ ಗಾಯ!
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಜೌರಿಯ ಗಡಿ ನಿಯಂತ್ರಣ ರೇಖೆಯ (ಎಲ್ಒಸಿ) ಉದ್ದಕ್ಕೂ ನಡೆದ ಶಂಕಿತ ಸ್ನೈಪರ್ ಗುಂಡಿನ ದಾಳಿಯಲ್ಲಿ ಗಡಿ ಹೊರಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಬುಧವಾರ ಗಾಯಗೊಂಡಿದ್ದಾರೆ. ರಾಜೌರಿಯ ನೌಶೇರಾ ಸೆಕ್ಟರ್ನ ಕಲ್ಸಿಯಾನ್ ಪ್ರದೇಶದಲ್ಲಿ ಮುಂಚೂಣಿ ಪೋಸ್ಟ್ ಅನ್ನು ಕಾಯುತ್ತಿದ್ದ ಸೈನಿಕನಿಗೆ ಗುಂಡು ತಗುಲಿದೆ ಎಂದು ಮೂಲಗಳು ತಿಳಿಸಿವೆ.
*******************************************************************
5.ಕೊಡಗು: ಜಿಲ್ಲೆಯ ಹಲವೆಡೆ ಲಘು ಭೂಕಂಪನದ ಅನುಭವ
ಬೆಂಗಳೂರು: ಕೊಡಗು ಜಿಲ್ಲೆಯ ಹಲವೆಡೆ ಬುಧವಾರ 1.6 ತೀವ್ರತೆಯ ಲಘು ಭೂಕಂಪದ ಅನುಭವಾಗಿದೆ. ಮದೆನಾಡು ಗ್ರಾಮ ಪಂಚಾಯಿತಿಯ ವಾಯವ್ಯ ದಿಕ್ಕಿನಲ್ಲಿ 2.4 ಕಿಮೀ ದೂರದ 5 ಕಿಮೀ ಆಳವನ್ನು ಭೂಕಂಪದ ಕೇಂದ್ರ ಬಿಂದು ಎಂದು ಗುರುತಿಸಲಾಗಿದೆ.
ರಿಕ್ಟರ್ ಮಾಪಕದಲ್ಲಿ ಸುಮಾರು 1.6 ರಷ್ಟು ಪ್ರಮಾಣದಲ್ಲಿ ಭೂಕಂಪನ ದಾಖಲಾಗಿದೆ. ಇಂದು ಬೆಳಗ್ಗೆ 10.49ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್ಎನ್ಡಿಎಂಸಿ) ತಿಳಿಸಿದೆ.
***************************************