
ಶುಭೋದಯ
ಅಚ್ಚುಕಟ್ಟುತನ, ಸ್ವಚ್ಚತೆ ಕೇವಲ ಇತರರಿಗೆ ಪ್ರದರ್ಶಿಸಲು ಮಾತ್ರವಲ್ಲ,
ವೈಯಕ್ತಿಕವಾಗಿಯೂ ನೆಮ್ಮದಿ, ಆತ್ಮವಿಶ್ವಾಸಕ್ಕಾಗಿ
-ತೇಜಸ್ವಿ
*******************************************************************************
1.ಪಾಕಿಸ್ತಾನ ಸೇರಿ 41 ದೇಶಗಳಿಗೆ ಟ್ರಂಪ್ ಸರ್ಕಾರದಿಂದ ಪ್ರಯಾಣ ನಿಷೇಧ ಸಾಧ್ಯತೆ
ಡೊನಾಲ್ಡ್ ಟ್ರಂಪ್ ಸರ್ಕಾರವು ಪಾಕಿಸ್ತಾನ, ಉತ್ತರ ಕೊರಿಯಾ ಸೇರಿದಂತೆ 41 ದೇಶಗಳಿಗೆ ಪ್ರಯಾಣದ ನಿಷೇಧವನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದೆ. 2ನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಹೊಸ ನಿಷೇಧದ ಭಾಗವಾಗಿ ಡಜನ್ಗಟ್ಟಲೆ ದೇಶಗಳ ನಾಗರಿಕರಿಗೆ ಪ್ರಯಾಣ ನಿರ್ಬಂಧಗಳನ್ನು ಹೊರಡಿಸುವ ಬಗ್ಗೆ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಒಟ್ಟು 41 ದೇಶಗಳನ್ನು ಮೂರು ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಲಾಗಿದೆ. ಅಫ್ಘಾನಿಸ್ತಾನ, ಇರಾನ್, ಸಿರಿಯಾ, ಕ್ಯೂಬಾ ಮತ್ತು ಉತ್ತರ ಕೊರಿಯಾ ಸೇರಿದಂತೆ 10 ದೇಶಗಳ ಮೊದಲ ಗುಂಪಿನ ಪೂರ್ಣ ವೀಸಾ ಅಮಾನತುಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
*******************************************************************************
2.ಕೆನಡಾ ಸಂಪುಟದಲ್ಲಿ ಭಾರತೀಯ ಮೂಲದ ಇಬ್ಬರಿಗೆ ಸಚಿವ ಸ್ಥಾನ; ದೆಹಲಿಯ ಖೇರಾಗೆ ಆರೋಗ್ಯ ಖಾತೆ
ಒಟ್ಟಾವ: ಕೆನಡಾ ನೂತನ ಪ್ರಧಾನಿ ಮಾರ್ಕ್ ಕಾರ್ನಿ ಅವರ ಸಂಪುಟದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದ್ದು, ದೆಹಲಿ ಮೂಲದ ಕಮಲಾ ಖೇರಾ ಅವರಿಗೆ ಆರೋಗ್ಯ ಖಾತೆ ನೀಡಲಾಗಿದೆ.
ಭಾರತೀಯ ಮೂಲದ ಅನಿತಾ ಆನಂದ್(58) ಅವರು ನಾವೀನ್ಯತೆ, ವಿಜ್ಞಾನ ಮತ್ತು ಕೈಗಾರಿಕಾ ಸಚಿವರಾಗಿ ಹಾಗೂ ಕಮಲಾ ಖೇರಾ(36) ಅವರು ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಮಲಾ ಖೇರಾ ಅವರು ಕೆನಡಾ ಸಂಸತ್ತಿನ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿಗೆ ಸಂಸತ್ ಪ್ರವೇಶಿಸಿದ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
**************************************************************************
3.ಆಧಾರ್, ವೋಟರ್ ಐಡಿ ಲಿಂಕ್ ಬಗ್ಗೆ ಚರ್ಚಿಸಲು ಸಭೆ ಕರೆದ ಚುನಾವಣಾ ಆಯೋಗ
ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಕುರಿತು ಚುನಾವಣಾ ಆಯೋಗ ಮುಂದಿನ ವಾರ ಕೇಂದ್ರ ಗೃಹ ಸಚಿವಾಲಯ, ಕಾನೂನು ಸಚಿವಾಲಯ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಉನ್ನತ ಅಧಿಕಾರಿಗಳ ಸಭೆ ಕರೆಯಲು ನಿರ್ಧರಿಸಿದೆ ಎಂದು ಚುನಾವಣಾ ಆಯೋಗದ ಮೂಲಗಳು ಇದು ತಿಳಿಸಿವೆ. 2021ರಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆ, 1951ಕ್ಕೆ ತಿದ್ದುಪಡಿ ತಂದು ಮತದಾರರ ಫೋಟೋ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದನ್ನು ಸಕ್ರಿಯಗೊಳಿಸಿದ ನಂತರ, ಚುನಾವಣಾ ಆಯೋಗ ಸ್ವಯಂಪ್ರೇರಿತವಾಗಿ ಮತದಾರರಿಂದ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿತು. ಆದರೆ ಇಲ್ಲಿಯವರೆಗೆ, ಆಯೋಗ ಇನ್ನೂ ಎರಡು ಡೇಟಾಬೇಸ್ಗಳನ್ನು ಲಿಂಕ್ ಮಾಡಿಲ್ಲ.
*************************************************************
4.IML 2025 Final: ಭಾರತಕ್ಕೆ ಮತ್ತೊಂದು ಟ್ರೋಫಿ ಗೆಲ್ಲುವ ಅವಕಾಶ; ಫೈನಲ್ ಎದುರಾಳಿ ವೆಸ್ಟ್ ಇಂಡೀಸ್
IML 2025 Final: ಭಾರತದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಮಾಸ್ಟರ್ಸ್ ಲೀಗ್ T20 ಪಂದ್ಯಾವಳಿಯ ಫೈನಲ್ ಪಂದ್ಯ ರಾಯ್ಪುರದಲ್ಲಿ ನಡೆಯಲಿದೆ. ಭಾರತ ಮಾಸ್ಟರ್ಸ್ ಮತ್ತು ವೆಸ್ಟ್ ಇಂಡೀಸ್ ಮಾಸ್ಟರ್ಸ್ ತಂಡಗಳು ಫೈನಲ್ನಲ್ಲಿ ಸ್ಪರ್ಧಿಸಲಿವೆ. ಜಿಯೋ ಹಾಟ್ಸ್ಟಾರ್ನಲ್ಲಿ ಈ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ಭಾರತ ಮಾಸ್ಟರ್ಸ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ವೆಸ್ಟ್ ಇಂಡೀಸ್ ಶ್ರೀಲಂಕಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ.
***************************************************************
5.ಕೇವಲ ಮುಸ್ಲಿಮರಿಗೆ ಮಾತ್ರ ಮೀಸಲಾತಿ ಎಂದು ಹೇಳಿದವರು ಯಾರು? ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನೆ
ಡಿಸಿಎಂ ಡಿಕೆ ಶಿವಕುಮಾರ್ ಅವರು ಗುತ್ತಿಗೆಗಳಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರ ಮೀಸಲಾತಿ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದು ಕೇವಲ ಮುಸ್ಲಿಮರಿಗೆ ಅಲ್ಲ, ಎಲ್ಲಾ ಅಲ್ಪಸಂಖ್ಯಾತರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ಧವಾಗಿದೆ ಮತ್ತು ತಮಿಳುನಾಡಿನಲ್ಲಿ ನಡೆಯುವ ಕ್ಷೇತ್ರ ಪುನರ್ವಿಂಗಡಣೆ ವಿರೋಧಿ ಸಭೆಯಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.