
ಮಾರ್ನಿಂಗ್ ಕ್ವಿಕ್ ನ್ಯೂಸ್ ಟೈಮ್
ಶುಭೋದಯ
ನಮ್ಮ ದೊಡ್ಡ ದೌರ್ಬಲ್ಯವು ಬಿಟ್ಟುಕೊಡುವುದರಲ್ಲಿದೆ.
ಯಶಸ್ವಿಯಾಗಲು ಅತ್ಯಂತ ಖಚಿತವಾದ ಮಾರ್ಗವೆಂದರೆ ಯಾವಾಗಲೂ ಇನ್ನೊಂದು ಬಾರಿ ಪ್ರಯತ್ನಿಸುವುದು.”
– ಥಾಮಸ್ ಎಡಿಸನ್
********************
1.ಬಾಂಗ್ಲಾದೇಶದ ಅಲ್ಪಸಂಖ್ಯಾತರ ದಾಳಿ ಬಗ್ಗೆ ಭಾರತ ಚಿಂತಿಸುವ ಅಗತ್ಯವಿಲ್ಲ; ಬಾಂಗ್ಲಾ ಟೀಕೆ
ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಸಂಬಂಧ ದಿನದಿಂದ ದಿನಕ್ಕೆ ಹಳಸುತ್ತಲೇ ಇದೆ. ಬಾಂಗ್ಲಾದೇಶದಿಂದ ಪರಾರಿಯಾಗಿದ್ದ ಮಾಜಿ ಪ್ರಧಾನಿ ಶೇಖ್ ಹಸೀನಾ ದೆಹಲಿಯಲ್ಲಿ ಆಶ್ರಯ ಪಡೆದಾಗಿನಿಂದ ಬಾಂಗ್ಲಾ ಮತ್ತು ಭಾರತದ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಆದರೆ, ಇತ್ತೀಚೆಗೆ ಎರಡೂ ದೇಶಗಳ ನಡುವೆ ಬಹಿರಂಗವಾಗಿಯೇ ಟೀಕೆ, ವಾಗ್ವಾದಗಳು ಹೆಚ್ಚಾಗುತ್ತಿವೆ. ಬಾಂಗ್ಲಾದೇಶದಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಯ ಬಗ್ಗೆ ಭಾರತ ಆತಂಕ ವ್ಯಕ್ತಪಡಿಸಿದೆ. ಆದರೆ, ಈ ಬಗ್ಗೆ ನೀವು ಮೂಗು ತೂರಿಸುವ ಅಗತ್ಯವಿಲ್ಲ ಎಂದು ಢಾಕಾ ಭಾರತಕ್ಕೆ ಸಂದೇಶ ರವಾನಿಸಿದೆ.
**************************************
2.ಬಂದಿದೆ ಮತ್ತೊಂದು ಹೊಸ ವೈರಸ್! 48 ಗಂಟೆಗಳಲ್ಲಿ 50 ಕ್ಕೂ ಹೆಚ್ಚು ಸಾವು
ಮತ್ತೊಂದು ಹೊಸ ವೈರಸ್ ಜನರ ನಿದ್ದೆ ಗೆಡಿಸಲು ಸಜ್ಜಾದಂತಿದೆ. ಕಳೆದ 48 ಗಂಟೆಗಳಲ್ಲಿ 50ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ವೈದ್ಯರು ಈ ರೋಗದ ಕುರಿತು ಯಾವುದೇ ರೀತಿಯ ಮಾಹಿತಿಯನ್ನು ನೀಡದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸದ್ಯ ಈ ಅಪರೂಪದ, ಭಯಾನಕ ವೈರಸ್ ಪಶ್ಚಿಮ ಕಾಂಗೋದಲ್ಲಿ ಪತ್ತೆಯಾಗಿದ್ದು ಐದು ವಾರಗಳ ಹಿಂದೆ ಬಾವಲಿ ತಿಂದ ಮೂವರು ಮಕ್ಕಳಲ್ಲಿ ಈ ಸೋಂಕು ಮೊದಲು ಕಂಡು ಬಂದಿದೆ. ಅದರ ನಂತರ, ಇದು ಬಹಳ ಬೇಗ ಹಲವಾರು ಮಂದಿಗೆ ಹರಡಿದ್ದು ಅವರಲ್ಲಿ 50 ಕ್ಕೂ ಹೆಚ್ಚು ಜನರು ಈಗಾಗಲೇ ಸಾವನ್ನಪ್ಪಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
**************************************
3.ಹಡಗು ವಿರೋಧಿ ನೌಕಾ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ DRDO
ಬಾಲಸೋರ್/ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಮತ್ತು ಭಾರತೀಯ ನೌಕಾಪಡೆಯು ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಮೊದಲ ಪ್ರಯೋಗ ನೌಕಾ ಹಡಗು ವಿರೋಧಿ ಕ್ಷಿಪಣಿಯನ್ನು (ಎನ್ಎಎಸ್ಎಂ-ಎಸ್ಆರ್) ಯಶಸ್ವಿಯಾಗಿ ಪರೀಕ್ಷಿಸಿತು. ಅಧಿಕಾರಿಗಳು ಬುಧವಾರ ಈ ಮಾಹಿತಿ ನೀಡಿದ್ದಾರೆ. ಮಂಗಳವಾರ ನಡೆಸಿದ ಪರೀಕ್ಷೆಯಲ್ಲಿ, ಭಾರತೀಯ ನೌಕಾಪಡೆಯ ‘ಸೀ ಕಿಂಗ್ ಹೆಲಿಕಾಪ್ಟರ್’ ನಿಂದ ಕ್ಷಿಪಣಿಯನ್ನು ಉಡಾಯಿಸಲಾಯಿತು. ಇದು ಹಡಗಿನ ಗುರಿಗೆ ಸಂಬಂಧಿಸಿದಂತೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು ಎಂದು ಅವರು ಹೇಳಿದರು.
************************************
4.ಪುಣೆಯ ಬಸ್ನಲ್ಲಿ ಅತ್ಯಾಚಾರ; ಕೋಪಗೊಂಡ ಸ್ಥಳೀಯರಿಂದ ಡಿಪೋ ಕ್ಯಾಬಿನ್ ಧ್ವಂಸ
ಮಹಾರಾಷ್ಟ್ರದ ಪುಣೆಯ ಸ್ವರ್ಗೇಟ್ ಬಸ್ ಡಿಪೋದಲ್ಲಿ 26 ವರ್ಷದ ಮಹಿಳೆಯ ಮೇಲೆ ಬಸ್ನಲ್ಲಿ ಅತ್ಯಾಚಾರ ನಡೆದಿದೆ. ಕೋಪಗೊಂಡ ಸ್ಥಳೀಯರು ಭದ್ರತಾ ಕ್ಯಾಬಿನ್ ಮತ್ತು ಅಪರಾಧ ನಡೆದ ಬಸ್ ಅನ್ನು ಧ್ವಂಸಗೊಳಿಸಿದ್ದಾರೆ. ಸರ್ಕಾರ 23 ಭದ್ರತಾ ಸಿಬ್ಬಂದಿಯನ್ನು ಸಹ ಅಮಾನತುಗೊಳಿಸಿದೆ. ಸ್ವರ್ಗೇಟ್ ಬಸ್ ಡಿಪೋದಲ್ಲಿ ಕೋಪಗೊಂಡ 20ಕ್ಕೂ ಹೆಚ್ಚು ಜನರ ಗುಂಪು ಜಮಾಯಿಸಿ ಭದ್ರತಾ ಸಿಬ್ಬಂದಿ ಕುಳಿತುಕೊಳ್ಳುವ ಕ್ಯಾಬಿನ್ನ ಗಾಜನ್ನು ಒಡೆದಿದ್ದಾರೆ. 26 ವರ್ಷದ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಭದ್ರತಾ ಸಿಬ್ಬಂದಿಯೇ ಕಾರಣ ಎಂದು ಕೋಪಗೊಂಡ ಗುಂಪು ಆರೋಪಿಸಿದೆ. ಅತ್ಯಾಚಾರ ನಡೆದ ಬಸ್ ನಿಲ್ದಾಣವು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮವು ನಡೆಸುವ ಅತಿದೊಡ್ಡ ನಿಲ್ದಾಣಗಳಲ್ಲಿ ಒಂದಾಗಿದೆ.
*********************************
5.ಕ್ಷೇತ್ರ ಪುನರ್ವಿಂಗಡಣೆಯಿಂದ ಒಂದು ಸ್ಥಾನವೂ ನಷ್ಟವಾಗುವುದಿಲ್ಲ; ತಮಿಳುನಾಡಿನಲ್ಲಿ ಅಮಿತ್ ಶಾ ಭರವಸೆ
ದಕ್ಷಿಣ ರಾಜ್ಯಗಳಿಗೆ ಕ್ಷೇತ್ರ ಪುನರ್ವಿಂಗಡಣೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೊಡ್ಡ ಭರವಸೆ ನೀಡಿದ್ದಾರೆ. ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತದ ಒಂದು ಸ್ಥಾನವೂ ಕಳೆದುಹೋಗುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಸೀಮಿತ ವಿಂಗಡಣೆಯಿಂದಾಗಿ ತಮಿಳುನಾಡು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ ಎಂಬ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹೇಳಿಕೆಯನ್ನು ಗೃಹ ಸಚಿವ ಅಮಿತ್ ಶಾ ತಳ್ಳಿಹಾಕಿದ್ದಾರೆ.
***************************