ಶುಭೋದಯ
“ನೀವು ಇನ್ನೊಂದು ಗುರಿಯನ್ನು ಹೊಂದಿಸಲು ಅಥವಾ ಹೊಸ ಕನಸನ್ನು
ಕಾಣಲು ಎಂದಿಗೂ ವಯಸ್ಸಾದವರಲ್ಲ.”
– ಸಿಎಸ್ ಲೂಯಿಸ್
*****************************
1.ಲಿಂಗಾಯತ ಸಮರ; ಯತ್ನಾಳ್ ವಿರುದ್ಧ ಅಖಾಡಕ್ಕಿಳಿದ ವಿಜಯೇಂದ್ರ ಬಣ
ಬಿಜೆಪಿ ಮನೆಯೊಳಗಿನ ಬಣ ಬಡಿದಾಟದ ದಂಗೆ ಮತ್ತೊಂದು ಸಮರಕ್ಕೆ ಸಾಕ್ಷಿಯಾಗುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್, ಬಿ.ವೈ. ವಿಜಯೇಂದ್ರ ಬಣದ ಮಧ್ಯೆ ಲಿಂಗಾಯತ ವಾರ್ ನಡೆಯುತ್ತಿದೆ. ಅತೃಪ್ತ ಲಿಂಗಾಯತ ದಾಳಕ್ಕೆ ಕೌಂಟರ್ ಆಗಿ ಬಿ.ವೈ. ವಿಜಯೇಂದ್ರ ಪರವಾಗಿ ಯಡಿಯೂರಪ್ಪ ಆಪ್ತರೇ ಇದೀಗ ಅಖಾಡಕ್ಕೆ ಧುಮುಕಿದ್ದಾರೆ. ಯತ್ನಾಳ್ ವಿರುದ್ಧಬಿ.ಎಸ್. ಯಡಿಯೂರಪ್ಪ ಆಪ್ತರಿಂದ ಶಕ್ತಿ ಪ್ರದರ್ಶನ ಯುದ್ಧ ಶುರುವಾಗಿದೆ.

*******************************************
2.ತೊಂದರೆಯಾಗಿದ್ದರೆ ಕ್ಷಮಿಸಿ; ಮಹಾಕುಂಭದ ಮುಕ್ತಾಯದ ವೇಳೆ ಭಕ್ತರಿಗೆ ಪ್ರಧಾನಿ ಮೋದಿ ಸಂದೇಶ
ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳವಾದ ತ್ರಿವೇಣಿ ಸಂಗಮದಲ್ಲಿ 66 ಕೋಟಿಗೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ. ಇದಾದ 45 ದಿನಗಳ ಈ ಕಾರ್ಯಕ್ರಮದಲ್ಲಿ ದೇಶಾದ್ಯಂತ ಇರುವ ಭಕ್ತರಿಗೆ ಸೇವೆ ಸಲ್ಲಿಸಿದ್ದಕ್ಕಾಗಿ ಕೇಂದ್ರ ಸರ್ಕಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮತ್ತು ಪ್ರಯಾಗ್ರಾಜ್ ನಿವಾಸಿಗಳ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬಂದ ನಂತರ ಮುಕ್ತವಾಗಿ ಉಸಿರಾಡುತ್ತಿರುವ ರಾಷ್ಟ್ರವನ್ನು ಈ ಬೃಹತ್ ಸಭೆ ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.

***********************************
3.ಹೆಬ್ಬಾಳದಲ್ಲಿ ಬಿಎಂಆರ್ಸಿಎಲ್ನಿಂದ ಬಹುಮಾದರಿ ಸಾರಿಗೆ ಕೇಂದ್ರ ನಿರ್ಮಾಣ ವಿಳಂಬ: ಡಿಕೆ ಶಿವಕುಮಾರ್ಗೆ ಸುರೇಶ್ ಕುಮಾರ್ ಪತ್ರ
ಬೆಂಗಳೂರಿನ ಹೆಬ್ಬಾಳದಲ್ಲಿ ಮೆಟ್ರೋ ಸಂಸ್ಥೆಯ 45 ಎಕರೆ ಜಾಗವನ್ನು ಖಾಸಗಿ ಸಂಸ್ಥೆ ಪಂಚತಾರಾ ಹೋಟೆಲ್ಗೆ ಬಳಸಲು ಯೋಜಿಸಿದೆ. ಇದು ಮೆಟ್ರೋ ವಿಸ್ತರಣೆಗೆ ಅಡ್ಡಿಯಾಗುತ್ತಿದೆ. ಸರ್ಕಾರ ಮೆಟ್ರೋ ಯೋಜನೆಗೆ ಆದ್ಯತೆ ನೀಡಬೇಕು ಮತ್ತು ಖಾಸಗಿ ಹಿತಾಸಕ್ತಿಗಳನ್ನು ಪರಿಗಣಿಸಬಾರದು. ಭೂಮಾಲೀಕರಿಗೆ ಸೂಕ್ತ ಪರಿಹಾರ ನೀಡುವುದು ಅಗತ್ಯ ಎಂದು ಶಾಸಕ ಸುರೇಶ್ ಕುಮಾರ್ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಂ.ಬಿ. ಪಾಟೀಲ್ಗೆ ಪತ್ರ ಬರೆದಿದ್ದಾರೆ.

*******************************
4.ಹಿಂದಿ ಮಾತಾಡುವ ಕ್ಷೇತ್ರದ ಸಂಸದರಾಗಿ ಏನು ಹೇಳುತ್ತೀರಿ?; ರಾಹುಲ್ ಗಾಂಧಿಗೆ ಸಚಿವ ಅಶ್ವಿನಿ ವೈಷ್ಣವ್ ಪ್ರಶ್ನೆ
ಎನ್ಇಪಿ ವಿವಾದದ ಬಗ್ಗೆ ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಟೀಕಿಸಿದ್ದರು. ಹಿಂದಿ ಭಾಷೆ 25 ಉತ್ತರ ಭಾರತದ ಭಾಷೆಗಳನ್ನು ‘ನುಂಗಿಹಾಕಿದೆ’ ಎಂದು ಸ್ಟಾಲಿನ್ ಗಂಭೀರ ಆರೋಪ ಮಾಡಿದ್ದರು. ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅಡಿಯಲ್ಲಿ ತ್ರಿಭಾಷಾ ನೀತಿಯ ಬಗ್ಗೆ ಘರ್ಷಣೆ ನಡೆಯುತ್ತಲೇ ಇದೆ. ಈ ಬಗ್ಗೆ ಸ್ಟಾಲಿನ್ ವಿರುದ್ಧ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕಿಡಿ ಕಾರಿದ್ದಾರೆ.

**********************************************
5.ಬೆಂಗಳೂರಿನ ಅರಮನೆ ಜಮೀನು ವಿವಾದ; ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಒಪ್ಪದ ಸುಪ್ರೀಂ ಕೋರ್ಟ್
ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.7 ಎಕರೆ ಜಾಗಕ್ಕೆ 3,011 ಕೋಟಿ ರೂ. ಟಿಡಿಆರ್ ಪರಿಹಾರ ನೀಡುವುದರಿಂದ ಪಾರಾಗಲು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಎರಡು ಕಿ.ಮೀ. ರಸ್ತೆ ಜಾಗಕ್ಕೆ 3400 ಕೋಟಿ ಮೌಲ್ಯದ ಪರಿಹಾರ ನೀಡುವುದು ನ್ಯಾಯಬದ್ಧವಲ್ಲ ಎಂದು ರಾಜ್ಯ ಸರ್ಕಾರದ ಪರ ವಕೀಲರು ವಾದಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ಸರ್ಕಾರಕ್ಕೆ ತಾತ್ಕಾಲಿಕ ಗೆಲುವು ಸಿಕ್ಕಿದೆ. ಬೆಂಗಳೂರಿನ ಅರಮನೆ ಜಮೀನಿಗೆ ಟಿಡಿಆರ್ ನೀಡುವ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನ್ಯಾಯಾಂಗ ನಿಂದನೆಯಿಂದ ಪಾರಾಗಿದೆ. ಆದರೆ, ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಲ್ಲ.

****************************

