ಅವತ್ತು ಸ್ಮಾರ್ಟ್ವಾಚ್ ನೋಡಿಕೊಂಡು ನಮ್ಮವನು ಹೇಳಿದ್ದ—
“ಕೆಲಸ ಸಿಕ್ಕಿ ಒಂದು ವರ್ಷ ಆಗ್ತಾ ಬಂದಿದೆ ಕಣೆ… ಇನ್ನೂ ಒಂದು ವಾಚ್ ಕೂಡ ತಗೋಳೋಕೆ ಆಗ್ಲಿಲ್ಲ. ಸಕತ್ ಇಷ್ಟಾ ಕಣೆ ಸ್ಮಾರ್ಟ್ವಾಚ್ ಹಾಕ್ಬೇಕು ಅಂತ. ತಗೋಬೇಕು ಅನ್ನಿಸ್ತಾ ಇರುತ್ತೆ… ಆಮೇಲೆ ತಗೋಂಡ್ರಾಯ್ತು ಅಂತ ದಿನ ಕಳೆಯುತ್ತಾ ಇದ್ದೀನಿ. ಅದು ಯಾವಾಗ ತಗೋತ್ತೀನಿ ಗೊತ್ತಿಲ್ಲ…”
ಅಷ್ಟು ಹೇಳಿ ಫೋನ್ ಇಟ್ಟಿದ್ದ.
ಈ ಕಡೆ ನನ್ನ ಮನಸ್ಸು ಕೇಳಬೇಕಾ…?
ಅದೇ ಸಮಯದಲ್ಲಿ ತಂಗಿಯ ಜೊತೆ ಫೋನ್ ನೋಡುತ್ತಾ ಇದ್ದಾಗ ಕಣ್ಣಿಗೆ ಬಿದ್ದದ್ದು ಒಂದು ಸ್ಮಾರ್ಟ್ ವಾಚ್.
ಅದನ್ನೇ ತಗೋಬೇಕು ಅನ್ನಿಸಿತು.
ಫೆಬ್ರವರಿ 13ರ ಸಂಜೆ ಬೆಂಗಳೂರುನಿಂದ ಹೈದರಾಬಾದ್ಗೆ ಬಸ್ ಹತ್ತಿದ್ದೆ.
ರಾತ್ರಿ 11ಕ್ಕೆ ತಲುಪಿದೆ. ಎಂದಿನಂತೆ ನಮ್ಮವನು ಬಂದು ಕರೆದುಕೊಂಡು ಮನೆಗೆ ಹೋದ. ಮನೆ ತಲುಪಿದ ಮೇಲೆ ಅವನು ಮಾಡಿದ ಕೈರುಚಿಯ ಊಟವನ್ನು ಅವನ ಕೈಯಿಂದಲೇ ಸವಿಯೋ ಹೊತ್ತಿಗೆ ರಾತ್ರಿ 12 ಆಯ್ತು.
ಫೆಬ್ರವರಿ 14, Valentines Day ಅನ್ನೋದನ್ನೇ…ಅವನು ಮರೆತುಬಿಟ್ಟಿದ್ದ—ನಾವು ಹುಡುಗಿರು, ಮರೆಯೋದಾದರು ಹೇಗೆ….?
ನಮ್ಮ ಮೊದಲ ವರ್ಷದ Valentines Day ಬೇರೆ…., ಅವನಿಗೆ ಆ ಸ್ಮಾರ್ಟ್ವಾಚ್ ಕೊಟ್ಟು
“I love you my sweet husband” ಅಂದಾಗ…
ಅವನ ಕಣ್ಣಲ್ಲಿ ಹೊಳೆಯುತ್ತಿದ್ದ ಖುಷಿ,
ಅವನ ಮುಖದಲ್ಲಿ ಅರಳಿದ ನಗು—
ಇನ್ನೂ ಕಣ್ಣಮುಂದೇ ಇದೆ.
ತುಂಬಾ ಖುಷಿಯಾಗಿ ನನ್ನನ್ನು ತಬ್ಬಿಕೊಂಡು, ಹಣೆಗೊಂದು ಮುತ್ತು ಕೊಟ್ಟು,
“I love you my wifey” ಅಂದಾಗ—
ಆ ಕ್ಷಣದ ಮೌಲ್ಯ ಎಷ್ಟು ದುಡ್ಡು ಕೊಟ್ಟರೂ ಸಿಗಲ್ಲ ಅನ್ನಿಸಿಬಿಟ್ಟಿತ್ತು.
ಈ ಘಟನೆಗೆ ಈಗ ಮೂರು ವರ್ಷಗಳೇ ಆಗಿವೆ.
ಆದರೆ ಆ ನೆನಪು ಇನ್ನೂ ಅಚ್ಚಹಸಿರಾಗೇ ಒದೆ.
ಇಂದು “I love you my wifey” ಎಂದು ಹೇಳುವ ಅವನು ನನ್ನೊಂದಿಗೆ ಇಲ್ಲ…
ಆದರೆ ಅವನೊಂದಿಗೆ ಕಳೆದ ಪ್ರತಿಯೊಂದು ನೆನಪು ಮಾತ್ರ ಇನ್ನೂ ಜೀವಂತವಾಗಿದೆ.
ಇಂದು ಒಂದು ಕಡೆ, ಪ್ರೀತಿ ದಿನಾಚರಣೆ ಆದರೆ, ಇನ್ನೊಂದು ಕಡೆ ಪುಲ್ವಾಮ ದುರಂತ ಕರಾಳ ದಿನಾಚಣೆ ಮಾಡಲಾಗುತ್ತಿದೆ.
ಒಂದೇ ಜೀವನದಲ್ಲಿ ಒಬ್ಬಬ್ಬರಿಗೂ ಒಂದೊಂದು ತರ ವಿಭಿನ್ನ ಅನುಭವವನ್ನು ನೀಡುತ್ತ ಹೋಗುತ್ತದೆ.
ಜೀವನ ಶಾಶ್ವತವಲ್ಲ.
ಯಾರು ಯಾರನ್ನು ಯಾವಾಗ ಕಳೆದುಕೊಳ್ಳುತ್ತಾರೋ ಯಾರಿಗೂ ಗೊತ್ತಿಲ್ಲ.
ಇರುವಷ್ಟು ದಿನ ಪ್ರೀತಿಯನ್ನು ಸಂಪೂರ್ಣವಾಗಿ ಕೊಡಿ. ಅನುಭವಿಸಿ. ಹೇಳಿ. ತೋರಿಸಿ.
ಶಾಶ್ವತವಲ್ಲದ ಬದುಕಿನಲ್ಲಿ ಆಶಾಶ್ವತತೆ ಹೆಚ್ಚು.
ಆದರೆ ನಮ್ಮ ಪ್ರೀತಿ ಮಾತ್ರ ಆ ಕ್ಷಣದಲ್ಲಿ ಶಾಶ್ವತವಾಗಿರುತ್ತದೆ.
ನಾವು ಪ್ರೀತಿಸುವ ಜೀವಗಳಿಗಾಗಿ ಏನು ಮಾಡಬಹುದು—ಅದು ಈಗಲೇ ಮಾಡಿ.
ಮತ್ತೆ ಆ ಅವಕಾಶಗಳು ಸಿಗುತ್ತವೆಯೋ ಇಲ್ಲವೋ…
ಬದುಕು ಮತ್ತೆ ಆ ಕ್ಷಣಗಳನ್ನು ನಮಗೆ ಹಿಂತಿರುಗಿಸುತ್ತದೆಯೋ ಇಲ್ಲವೋ…ಯಾರಿಗೂ ಗೊತ್ತಿಲ್ಲ.
Happy Valentine’s day
– ಮೌನಾತ್ಮ
