ರಾಮನಾಥಪುರ: ಕಾವೇರಿ ನದಿ ಸಂರಕ್ಷಣೆಗೆ ವಿಶೇಷ ಕಾಯ್ದೆ ರೂಪಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದ್ದು, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ವತಿಯಿಂದ ನಿರಂತರವಾಗಿ ನಡೆಯುತ್ತಿರುವ ಕಾವೇರಿ ಅಭಿಯಾನ ಯಾತ್ರೆಗೆ ಅಭಿನಂದನೆ ಸಲ್ಲಿಸುವುದಾಗಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಅರ್.ಕೆ. ಶ್ರೀನಿವಾಸ್ ತಿಳಿಸಿದ್ದಾರೆ.
ಪಟ್ಟಣದ ರಾಮೇಶ್ವರಸ್ವಾಮಿ ದೇವಾಲಯ ಸಮೀಪದ ವಹ್ನಿಪುಷ್ಕರಣಿಯಲ್ಲಿ ನಡೆದ 150ನೇ ಹುಣ್ಣಿಮೆ ಸ್ವಚ್ಛತಾ ಕಾರ್ಯಕ್ರಮದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದಿನಿಂದಲೂ ಸಾಧು–ಸಂತರು ಹಾಗೂ ವಿವಿಧ ಸಂಘಟನೆಗಳು ಕಾವೇರಿ ನದಿ ರಕ್ಷಣೆಗೆ ಆಗ್ರಹಿಸಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ ಕಾವೇರಿ ನದಿಯನ್ನು ಮಲಿನವಾಗದಂತೆ ಕಾಪಾಡಲು ಹಾಗೂ ನದಿ ಸಂರಕ್ಷಣೆಗೆ ಕಾನೂನುಬದ್ಧ ರಕ್ಷಣೆ ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಕಾಯ್ದೆ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಖಜಾಂಚಿ ರಘು, ಸಂಘಟನೆ ಕಾರ್ಯದರ್ಶಿ ಪಿ.ಎನ್.ಟಿ. ಶಿವಪ್ಪ, ತಾಲೂಕು ಅಧ್ಯಕ್ಷ ಸಿದ್ದರಾಜು, ಖಜಾಂಚಿ ಕೇಶವ ಸೇರಿದಂತೆ ಹಲವರು ಭಾಗವಹಿಸಿದ್ದರು. ವೇ. ವೆಂಕಟೇಶ್ ಮಹಾ ಆರತಿ ಪೂಜೆ ಸಲ್ಲಿಸಿದರು.