ಶ್ರವಣಬೆಳಗೊಳ: ಶ್ರೀ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಇಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಮಂತ್ರಿ ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ, ಅವರ ಆರೋಗ್ಯ ವಿಚಾರಿಸಿದರು ಮತ್ತು ಬೇಗ ಗುಣಮುಖರಾಗಬೇಕೆಂದು ಹಾರೈಸಿದರು.

ಸ್ವಾಮೀಜಿ ಅವರು ದೇವರ ಪ್ರಸಾದ, ಶ್ರೀಮಠದ ಫಲ ತಾಂಬೂಲ, ಪುಷ್ಪಮಾಲೆ ಇತ್ಯಾದಿಗಳನ್ನು ಪಡೆದುಕೊಂಡು ಪದ್ಯಮಾನಾಭನಗರದಲ್ಲಿರುವ ದೇವೇಗೌಡರ ಮನೆಗೆ ತೆರಳಿದರು. ಅವರು ದೇವೇಗೌಡರ ಹಣೆ ಹಾಗೂ ತಲೆಗೆ ಸ್ವತಃ ಗಂಧೋದಕ ಹಚ್ಚಿ, ದೇವರ ಆಶೀರ್ವಾದದಿಂದ ಮೊದಲಿನಂತಾಗಿ ಆರೋಗ್ಯ ಮತ್ತೆ ಸುಧಾರಿಸಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ದೇವೇಗೌಡರಿಗೆ ದೇವರ ಪ್ರಸಾದ ನೀಡಿ, ಅವರ ತಲೆಯ ಮೇಲೆ ಹೂ ಇಟ್ಟು, “ನಿಮ್ಮ ಆಯಸ್ಸು ವೃದ್ಧಿಯಾಗಲಿ ಮತ್ತು ನಿಮ್ಮಿಂದ ಜಿಲ್ಲೆ, ನಾಡು, ದೇಶಕ್ಕೆ ಅಮೂಲ್ಯ ಸೇವೆ ದೊರಕಲಿ” ಎಂದು ಭಗವಾನ್ ಬಾಹುಬಲಿ ಸ್ವಾಮೀಜಿಯವರು ಪ್ರಾರ್ಥಿಸಿದರು.

ಕೈ ಮುಗಿದು ಗುರುವಂದನೆ ಸಲ್ಲಿಸಿದ ದೇವೇಗೌಡರು, ಜಿನೈಕ್ಯರಾದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಕೊಡುಗೆ, ಬಾಂಧವ್ಯವನ್ನು ಸ್ಮರಿಸಿದರು. ಜ್ವರ ಮತ್ತು ಮೂತ್ರ ಸೋಂಕಿನ ಕಾರಣ ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಗೌಡರು, ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆ ಪಡೆದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.
— ಮಂಜುನಾಥ್ ಐ.ಕೆ

[…] […]