ಸಕಲೇಶಪುರ, ಮಾ.27: ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಟ್ಟದ ಬೈರವೇಶ್ವರ ದೇವಾಲಯ ಆವರಣದಲ್ಲಿ ಫೋಟೋಗ್ರಾಫರ್ ಮೇಲೆ, ಸ್ಥಳೀಯ ಯುವಕರು ಹಲ್ಲೆ ನಡೆಸಿದರೆಂದು ಆರೋಪ ಕೇಳಿಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗಾಯಾಳು ಫೋಟೋಗ್ರಾಫರ್ ಚೇತನ್ ಕುಮಾರ್ ಆಗ್ರಹಿಸಿದ್ದಾರೆ.
ಘಟನೆ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಹಲ್ಲೆಗೊಳಗಾದ ಫೋಟೋಗ್ರಾಫರ್ ಚೇತನ್ ಕುಮಾರ್, “ನಾವು ಬೆಳಿಗ್ಗೆಯಿಂದಲೇ ಅಲ್ಲಿ ಫೋಟೋಗ್ರಫಿ ಮಾಡುತ್ತಿದ್ದೆವು. ಮೂರು-ನಾಲ್ಕು ತಂಡಗಳು ಶೂಟ್ನಲ್ಲಿ ನಿರತರಾಗಿದ್ದವು. ಈ ವೇಳೆ ಬೆಂಗಳೂರಿನಿಂದ ಬಂದಿದ್ದ ಒಂದು ತಂಡದ ಮೇಲೆ ಸ್ಥಳೀಯ ಯುವಕರು ಸುಖಾಸುಮ್ಮನೆ ಹಲ್ಲೆ ನಡೆಸಿದರು” ಎಂದು ಆರೋಪಿಸಿದ ಅವರು,

“ಹಲ್ಲೆ ವೇಳೆ ಮಹಿಳೆಯೊಬ್ಬರ ತಲೆಗೆ ಹೊಡೆದು ದುರ್ವರ್ತನೆ ಮಾಡಲಾಗಿದೆ. ಇದನ್ನು ನಾವು ಪ್ರಶ್ನಿಸಿದ್ದಕ್ಕೆ ಮತ್ತಷ್ಟು ಯುವಕರನ್ನು ಕರೆಸಿ, ಸ್ಥಳೀಯರು ಕಾರಣವಿಲ್ಲದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ” ಎಂದು ಅವರು ದೂರಿದರು.
ಬೆಟ್ಟದ ಬೈರವೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ್ದು, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹಾಗೂ ಪ್ರವಾಸಿಗರು ಬರುತ್ತಾರೆ. ಇಂತಹ ಸಾರ್ವಜನಿಕ ಸ್ಥಳದಲ್ಲಿ ಈ ರೀತಿಯ ಘಟನೆ ಮೂರನೇ ಬಾರಿ ನಡೆಯುತ್ತಿರುವುದು ಆತಂಕಕಾರಿ ಎಂದು ಹೇಳಿದ್ದಾರೆ.

ಇನ್ನೂ ಈ ಸಂಬಂಧ ಚೇತನ್ ಸಹೋದರಿಯರು ಮಾಧ್ಯಮದೊಂದಿಗೆ ಮಾತನಾಡಿ, ಘಟನೆಯಲ್ಲಿ ಫೋಟೋಗ್ರಾಫರ್ಗಳಷ್ಟೇ ಅಲ್ಲದೆ, ಶೂಟ್ಗೆ ಬಂದಿದ್ದ ಗ್ರಾಹಕರ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. “ನಮ್ಮ ಕ್ಯಾಮೆರಾ, ಚಿನ್ನದ ಸರ ಸೇರಿದಂತೆ ಹಲವು ವಸ್ತುಗಳು ಕಳೆದುಹೋಗಿವೆ. ಪುಂಡರ ಅಟ್ಟಹಾಸಕ್ಕೆ ಕಡಿವಾಣ ಹಾಕಬೇಕು. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
