ಹಾವೇರಿ: ವಿದ್ಯಾರ್ಥಿಯೊಬ್ಬ ಕಳ್ಳತನ ಮಾಡಿದ ಎಂಬ ಕಾರಣಕ್ಕಾಗಿ ಕಿಡ್ನಾಪ್ ಮಾಡಿ ಅರೆ ಬಿತ್ತಲೆ ಗೊಳಿಸಿ ಹಿಗ್ಗ ಮುಗ್ಗ ಥಳಿಸಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಿಮ್ಮಪುರದಲ್ಲಿ ನಡೆದಿದೆ.
ನೇರವಾಗಿ ಶಾಲೆಗೆ ನುಗ್ಗಿದ ಕಿಡಿಗೇಡಿಗಳು ಬಾಲಕನನ್ನ ಕಾರಿನಲ್ಲಿ ಹೊತ್ತೊಯ್ದು ಕಿಡ್ನಾಪ್ ಮಾಡಿದ್ದಾರೆ.
ಬಳಿಕ ಮರಕ್ಕೆ ಕಟ್ಟಿ, ಅರೆಬೆತ್ತಲೆ ಗೊಳಿಸಿ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಅಸಲಿಗೆ ಆಗಿದ್ದೇನಪ್ಪ ಅಂದ್ರೆ ತಿಮ್ಮಾಪುರ ಗ್ರಾಮದ ಎಸ್ವಿಎಲ್ಪಿ ಸರ್ಕಾರಿ ಪ್ರೌಡ ಶಾಲೆಯ ನಾಗರಾಜ್ ಶೇಖರ್ ಮೈಸೂರ್ ಎಂಬ ವಿದ್ಯಾರ್ಥಿ ಮಂಜುನಾಥ್ ಬಗಾಡೆ ಅವರ ಮನೆಯಲ್ಲಿ 500 ರೂಪಾಯಿ ಕದ್ದಿದ್ದ ಎಂದು ಆರೋಪಿಸಲಾಗಿದೆ.
ನಾಗರಾಜ್ ಮೇಲೆ ಅನುಮಾನದಿಂದ ಹಲ್ಲೆ ಮಾಡಲಾಗಿದ್ದು, ಪೊಲೀಸರೂ ಸಹ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆನ್ನು, ತೊಡೆ, ಕೆನ್ನೆ ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಬಾಸುಂಡೆ ಬರುವಂತೆ ನಾಗರಾಜ್ ಗೆ ಆರೋಪಿಗಳು ಹೊಡೆದಿದ್ದಾರೆ.
ಗಣಪತಿ ಗುಣೋಜಿ, ಮಂಜುನಾಥ್ ಬಗಾಡೆ ಎಂಬುವವರ ವಿರುದ್ಧ ನಾಗರಾಜ್ ಕುಟುಂಬಸ್ಥರು ಪುತ್ರನನ್ನು ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡೋದಕ್ಕೆ ಹೋದ್ರೆ ಪೊಲೀಸರು 9 ಗಂಟೆಯವರೆಗೆ ಕೂರಿಸಿ ಚಿತ್ರಹಿಂಸೆ ನೀಡಿದ್ದಾರೆ. ಮಾತ್ರವಲ್ಲ ಪೊಲೀಸರು ತನಗೆ ಹೊಡೆದಿದ್ದಾರೆ ಅಂತ ನಾಗರಾಜ್ ದೂರಿದ್ದಾನೆ. ನಾಗರಾಜ್ ತಂದೆ ಶೇಖರ್ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
