ನವದೆಹಲಿ: ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿ ಏಸರ್ ಇಂಡಿಯಾ, ತನ್ನ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡಲು ನಿರ್ಧರಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಮಹಿಳಾ ಸಿಬ್ಬಂದಿ ತಮ್ಮ ಮುಟ್ಟಿನ ಆರೋಗ್ಯದ ಬಗ್ಗೆ ಹೆಚ್ಚಿನ ಸುರಕ್ಷತೆ ವಹಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದೆ.
‘ಕೆಲಸ ಸ್ಥಳದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಏಸರ್ ಇಂಡಿಯಾವು ‘ಮಾತ್ರಿಕಾ’ ಮುಟ್ಟಿನ ರಜೆ ನೀತಿಯನ್ನು ಪರಿಚಯಿಸಿದೆ. ಈ ನೀತಿಯಡಿಯಲ್ಲಿ ಮಹಿಳಾ ಉದ್ಯೋಗಿಗಳು ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ರಜೆ ಪಡೆಯಲು ಅರ್ಹರಾಗಿರುತ್ತಾರೆ’ ಎಂದಿದೆ.
ಇದಕ್ಕೂ ಮೊದಲು ಪ್ರಮುಖ ಕಾರ್ಪೊರೇಟ್ ಕಂಪನಿಗಳಲ್ಲಿ ಒಂದಾದ ಲಾರ್ಸೆನ್ ಮತ್ತು ಟೂಬ್ರೊ(ಎಲ್&ಟಿ), ತನ್ನ ಮಹಿಳಾ ಉದ್ಯೋಗಿಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಘೋಷಿಸಿತ್ತು
ಬಿಹಾರ, ಒಡಿಶಾ, ಸಿಕ್ಕಿಂ ಮತ್ತು ಕೇರಳ ರಾಜ್ಯಗಳು ಮಹಿಳೆಯರಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ಘೋಷಿಸಿವೆ.
