
Oplus_16908288
ಹಾಸನ: ಈ ಬಾರಿಯ ಬಜೆಟ್ನಲ್ಲಿ ಜಿಲ್ಲೆಗೆ ಯಾವುದೇ ಯೋಜನೆ ಕೊಟ್ಟಿಲ್ಲ, ಬಾಕಿ ಯೋಜನೆಗಳಿಗೂ ಹಣ ನಿಗದಿ ಮಾಡಿಲ್ಲ. ಬದಲಾಗಿ ನಮ್ಮ ಜಿಲ್ಲೆಗೆ ಪಂಚ ಗ್ಯಾರಂಟಿ ಜೊತೆಗೆ ಹೆಚ್ಚುವರಿಯಾಗಿ ಜೂಜು, ಎಣ್ಣೆ, ಮಟ್ಕಾ, ಗಾಂಜಾ ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿಗಳು 2025-2026ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನು ಮುಂದುವರೆಸಿದ್ದಾರೆ. ಆದರೆ ಬಜೆಟ್ನಲ್ಲಿ ಹಾಸನ ಜಿಲ್ಲೆಯೇ ಇಲ್ಲ ಎಂದು ವಿಷಾದಿಸಿದರು.
ಈ ಸರ್ಕಾರಕ್ಕೆ ಜಿಲ್ಲೆಯ ಜನ ಧನ್ಯವಾದ ಹೇಳಬೇಕು ಎಂದು ಲೇವಡಿ ಮಾಡಿದ ರೇವಣ್ಣ, ಅನೇಕ ಕಡೆಗಳಲ್ಲಿ ಎಣ್ಣೆ ಅಂಗಡಿ ಹೆಚ್ಚಾಗಿ ಗೌರವಸ್ಥ ಕುಟುಂಬ ಬದಕಲು ಆಗುತ್ತಿಲ್ಲ, ಜೂಜು-ಮಟ್ಕಾ ದಂಧೆಯೂ ಹೆಚ್ಚಾಗಿದೆ ಎಂದು ಬೇಸರ ಹೊರ ಹಾಕಿದರು.
ತೋಟಗಾರಿಕೆ ಕಾಲೇಜು ಮಂಜೂರು ಮಾಡ್ತಾರೆ ಎನ್ನುವ ನಿರೀಕ್ಷೆ ಇತ್ತು, ಫ್ಲೈಓವರ್ಗೆ ದುಡ್ಡು ಕೊಡ್ತಾರೆ ಎಂದು ಭಾವಿಸಿದ್ದೆವು, ಕುಮಾರಸ್ವಾಮಿ ಸಿಎಂ ಆದಾಗ ತಂದ ಯೋಜನೆಗಳಿಗೆ ಮುಂದುವರಿದ ಹಣ ಬಿಡುಗಡೆ ಮಾಡಬೇಕಿತ್ತು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೂರು ಕೋಟಿ ಕೊಡಬೇಕಿತ್ತು, ಅದನ್ನೂ ಕೊಟ್ಟಿಲ್ಲ ಎಂದು ಕಿಡಿ ಕಾರಿದರು.
ಒಟ್ಟಿನಲ್ಲಿ ಜಿಲ್ಲೆಗೆ ಬಜೆಟ್ನಲ್ಲಿ ಯಾವುದೇ ಯೋಜನೆ ನೀಡಿಲ್ಲ, ಹಾಸನ ಕರ್ನಾಟಕದ ಬಜೆಟ್ ಬುಕ್ ನಲ್ಲಿ ಇಲ್ಲ, ದೆಹಲಿ ಬಜೆಟ್ ಬುಕ್ನಲ್ಲಿ ಇದೆ. ಕೇಂದ್ರದಿಂದ ಜಿಲ್ಲೆಗೆ ಯಾವ ಯೋಜನೆ ಬೇಕೋ ಅದನ್ನು ತರುವ ಶಕ್ತಿ ದೇವೇಗೌಡರಿಗೆ ಇದೆ ಎಂದು ಸವಾಲು ಹಾಕಿದರು.
ನಗರದ ಅಲ್ಪಸಂಖ್ಯಾತರು ವಾಸಿಸುವ ಸ್ಥಳಗಳಲ್ಲಿ ರಸ್ತೆ ನಿರ್ಮಾಣ ಮಾಡಲು ಹಣವನ್ನಾದರೂ ನೀಡಬಹುದಿತ್ತು. ಅಲ್ಪಸಂಖ್ಯಾತರಿಗೆ 1 ಸಾವಿರ ವಸತಿ ನೀಡಬಹುದಿತ್ತು. ಕೆಲವರು ಟೀಕೆ ಮಾಡುತ್ತಾರೆ ನಾನು ಅದೆಲ್ಲ ಮಾಡುವುದಿಲ್ಲ, ಹಾಸನ ಮಹಾನಗರ ಪಾಲಿಕೆ ಘೋಷಣೆ ಮಾಡಿದರು, ಮುಂದಿನ ಚುನಾವಣೆ ವೇಳೆಗೆ ಮಹಾನಗರ ಪಾಲಿಕೆ ಆಗುತ್ತದೆ. ಮಹಾನಗರ ಪಾಲಿಕೆ ಅಭಿವೃದ್ಧಿಗೆ ಹಣ ಮೀಸಲಿಟ್ಟಿಲ್ಲ. ಹಾಸನ ಜಿಲ್ಲೆಯ ಬೆಳವಣಿಗೆಯನ್ನು ಈ ಸರ್ಕಾರ ಸಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲೆಗೆ ಶಿಕ್ಷಣ, ಫ್ಲೈ ಓವರ್, ಆಸ್ಪತ್ರೆ, ಪಾರ್ಕ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ದೂರಿದರು.
7 ಗಂಟೆಗೇ ಎಣ್ಣೆ ಹಾಕ್ತಾರೆ: ಕರ್ತವ್ಯದಲ್ಲಿದ್ದಾಗ ಪೊಲೀಸರು ಏಳು ಗಂಟೆಗೇ ಎಣ್ಣೆ ಹಾಕ್ತಾರೆ ಎಸ್ಪಿಯವರು ಇದನ್ನು ತಡೆಗಟ್ಟಬೇಕು. ಮಟ್ಕಾ, ಜೂಜು, ಮದ್ಯ ಸೇವನೆಯಿಂದ ಅವರ ಮನೆಯ ಹೆಣ್ಣು ಮಕ್ಕಳು ಒಡವೆ ಮಾರಿಕೊಳ್ಳುತ್ತಿದ್ದಾರೆ.
ಎಸ್ಪಿಯವರು ಕ್ರಮ ಕೈಗೊಳ್ಳಬೇಕು, ಎಸ್ಪಿಯವರ ಅಧೀನ ಅಧಿಕಾರಿಗಳು ಅವರ ಕಂಟ್ರೋಲ್ನಲ್ಲಿ ಇಲ್ಲ! ಪೊಲೀಸರು ಕೆಲಸ ಮುಗಿಸಿ ಮನೆಗೆ ಹೋಗಿ ಕುಡಿಯಲಿ ನಾನು ಬೇಡ ಅನ್ನಲ್ಲ, ಆದರೆ ಕತ್ಯವ್ಯದಲ್ಲಿದ್ದಾಗಲೇ ಪೊಲೀಸರು ಎಣ್ಣೆ ಹಾಕ್ತಾರೆ! ಕಂಪ್ಲೆಂಟ್ ಕೊಡಲು ಬಂದವರನ್ನು ಬಾಯಿಗೆ ಬಂದಂತೆ ಬೈಯ್ತಾರೆ ಎಂದು ಬೊಟ್ಟು ಮಾಡಿದರು.
ಎಲ್ಲೆಡೆ ವೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದ್ದು, ಇದಕ್ಕೂ ಎಸ್ಪಿ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಇದ್ದರು.