
ದರ್ಶನ್ ಮೇಲಿನ ಕೋಪನ ನನ್ನ ಮೇಲೆ ತೀರಿಸಿಕೊಳ್ತಿದ್ದಾರೆ; ದಿನಕರ ತೂಗುದೀಪ
ದರ್ಶನ್ ಮೇಲಿನ ಕೋಪನ ನನ್ನ ಮೇಲೆ ತೀರಿಸಿಕೊಳ್ತಿದ್ದಾರೆ:ದಿನಕರ್ ತೂಗುದೀಪ
ಬೆಂಗಳೂರು : ದಿನಕರ್ ತೂಗುದೀಪ ಏಳು ವರ್ಷಗಳ ಬಳಿಕ ಮತ್ತೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ಈ ಬಾರಿ ರಾಯಲ್ ಎಂಬ ಫ್ಯಾಮಿಲಿ ಎಂಟರ್ಟೈನರ್ ಜೊತೆ ಪ್ರೇಕ್ಷಕರೆದುರಿಗೆ ಬಂದಿದ್ದಾರೆ. ನಿನ್ನೆ ( ಜನವರಿ 24 ) ರಾಯಲ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಾಯಕನಾಗಿ ವಿರಾಟ್ ಹಾಗೂ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ.
ಚಿತ್ರಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಚಿತ್ರ ಒಂದೊಮ್ಮೆ ನೋಡಬಹುದಾದ ಫ್ಯಾಮಿಲಿ ಎಂಟರ್ಟೈನರ್ ಎನಿಸಿಕೊಂಡಿದೆ. ಆದರೆ ಬುಕ್ಮೈಶೋನಲ್ಲಿ ನಿನ್ನೆ ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ಕೆಲ ಕಿಡಿಗೇಡಿಗಳು ನೆಗೆಟಿವ್ ವಿಮರ್ಶೆಗಳನ್ನು ನೀಡಿದ್ದರು. ಇದರಿಂದಾಗಿ ಚಿತ್ರದ ಒಟ್ಟಾರೆ ರೇಟಿಂಗ್ 10ಕ್ಕೆ ಕೇವಲ 3 ಇತ್ತು.
ಈ ಮೂಲಕ ಚಿತ್ರ ಚೆನ್ನಾಗಿಲ್ಲ ಎಂಬುದಾಗಿ ಬಿಂಬಿಸುವ ಉದ್ದೇಶದಿಂದ ಬೇಕಂತಲೇ ಕೆಟ್ಟ ವಿಮರ್ಶೆಗಳನ್ನು ನೀಡಲಾಗಿತ್ತು. ಈ ಕುರಿತಾಗಿ ದಿನಕರ್ ತೂಗುದೀಪ ಸಹ ಮಾತನಾಡಿದ್ದಾರೆ. ನಿನ್ನೆ ರಾಯಲ್ ಪ್ರದರ್ಶನ ಕಾಣುತ್ತಿದ್ದ ವಿವಿಧ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದ ದಿನಕರ್ ತೂಗುದೀಪ ಜಿಟಿ ವರ್ಲ್ಡ್ ಮಾಲ್ಗೂ ಸಹ ತೆರಳಿದ್ದರು.
ಸಂದರ್ಭದಲ್ಲಿ ಪ್ರೇಕ್ಷರನ್ನುದ್ದೇಶಿಸಿ ಮಾತನಾಡಿದ ದಿನಕರ್ ತೂಗುದೀಪ “ನೀವು ಕುಟುಂಬ ಸಮೇತರಾಗಿ ಬಂದು ಚಿತ್ರ ನೋಡಿದ್ದು ತುಂಬಾ ಖುಷಿಯಾಯಿತು. ನೋಡಿ ನೀವು ನೋಡಿದ್ರೆ ಸಿನಿಮಾ ಸೂಪರ್ ಅಂತಾ ಇದೀರ. ಬುಕ್ಮೈಶೋನಲ್ಲಿ ಸುಮ್ಸುಮ್ನೆ ನೆಗೆಟಿವ್ ರಿವ್ಯೂಸ್ ಹಾಕ್ತಾ ಇದಾರೆ. ಬರೀ ಒಂದು ಸ್ಟಾರ್ ಕೊಡ್ತಾ ಇದಾರೆ. ಸೋಲಿಸಬೇಕೆಂದು ಹಲವರು ಪ್ರಯತ್ನ ಪಡ್ತಾ ಇದಾರೆ. ಆದರೆ ನೀವು ನಮ್ಮನ್ನು ಕೈ ಹಿಡಿಯುತ್ತೀರ ಅಂತ ನಂಬಿದ್ದೇನೆ. ತುಂಬಾ ಜನ ಸೋಲಿಸೋಕೆ ಪ್ರಯುತ್ನ ಪಡ್ತಾ ಇದಾರೆ. ಗೊತ್ತಿಲ್ಲ ದರ್ಶನ್ ಮೇಲಿರುವ ಕೋಪನ ನನ್ನ ಮೇಲೆ ತೀರಿಸಿಕೊಳ್ತಿದ್ದಾರೆ ಅನ್ಸುತ್ತೆ. ಹಾಗಾಗಿ ನೀವುಗಳು ನಮಗೆ ಸಪೋರ್ಟ್ ಮಾಡಬೇಕು. ನಿಮ್ಮ ಬೆಂಬಲ ನಮಗೆ ಆನೆ ಬಲ ಇದ್ದಂಗೆ. ನೀವು ನಮ್ಮ ಜೊತೆ ಇರೋವರೆಗೂ ನಾವು ಮುಂದೆ ನಿಂತಿರುತ್ತೇವೆ” ಎಂದು ಹೇಳಿಕೆ ನೀಡಿದರು.