ಬೆಂಗಳೂರು, ಫೆಬ್ರವರಿ 6: ನಕಲಿ ಸುದ್ದಿ ಹಾಗೂ ಸಮಾಜ ವಿರೋಧಿ ಅಂಶಗಳನ್ನು ಒಳಗೊಂಡ ಡಿಜಿಟಲ್ ಕಂಟೆಂಟ್ಗಳ ನಿಯಂತ್ರಣಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನ ಬಳಕೆಗೆ ಕರ್ನಾಟಕ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಸುಮಾರು ₹67.26 ಕೋಟಿ ವೆಚ್ಚದಲ್ಲಿ ‘ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್ಸ್’ ಎಂಬ ಎಐ ಆಧಾರಿತ ಸಾಫ್ಟ್ವೇರ್ ಅಭಿವೃದ್ಧಿಪಡಿಸಿ ಜಾರಿಗೊಳಿಸುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್, ಸಾಂಪ್ರದಾಯಿಕ ವಿಧಾನಗಳ ಮೂಲಕ ನಕಲಿ ಸುದ್ದಿಗಳನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಐ ಆಧಾರಿತ ತಂತ್ರಜ್ಞಾನವನ್ನು ಬಳಸುವ ಅಗತ್ಯ ಎದುರಾಗಿದೆ ಎಂದು ಹೇಳಿದರು.
ಫೇಕ್ ನ್ಯೂಸ್ ತಡೆಗೆ ಎಐ ತಂತ್ರಜ್ಞಾನ
‘ಸೋಶಿಯಲ್ ಮೀಡಿಯಾ ಅನಾಲಿಟಿಕ್ಸ್ ಸೊಲ್ಯೂಷನ್ಸ್’ ಸಾಫ್ಟ್ವೇರ್ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಡಿಜಿಟಲ್ ಕಂಟೆಂಟ್ಗಳನ್ನು ವಿಶ್ಲೇಷಿಸಿ, ಭಯೋತ್ಪಾದನೆ, ದ್ವೇಷ ಭಾಷಣ, ಕೋಮು ಹಿಂಸಾಚಾರಕ್ಕೆ ಪ್ರಚೋದನೆ, ಮಕ್ಕಳ ಅಪಹರಣ ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟುಮಾಡುವ ಸಮಾಜ ವಿರೋಧಿ ಚಟುವಟಿಕೆಗಳನ್ನು ಗುರುತಿಸಲಿದೆ. ಅಲ್ಲದೆ, ನಕಲಿ ಸುದ್ದಿಗಳ ಮೂಲವನ್ನು ಪತ್ತೆಹಚ್ಚುವ ಸಾಮರ್ಥ್ಯವೂ ಈ ವ್ಯವಸ್ಥೆಗೆ ಇರಲಿದೆ ಎಂದು ಸಚಿವರು ವಿವರಿಸಿದರು.
ಅಧಿಕಾರಿಗಳಿಗೆ ತಕ್ಷಣ ಮಾಹಿತಿ
ಗೃಹ ಇಲಾಖೆಯ ಅಧೀನದಲ್ಲಿ ಈ ಯೋಜನೆಯನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಜಾರಿಗೆ ತರಲಾಗುತ್ತದೆ. ಫೇಸ್ಬುಕ್, ಯೂಟ್ಯೂಬ್, ಎಕ್ಸ್ (ಟ್ವಿಟರ್), ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡುವ ದ್ವೇಷ ಭಾಷಣ ಹಾಗೂ ತಪ್ಪು ಮಾಹಿತಿಯ ಪೋಸ್ಟ್ಗಳನ್ನು ಎಐ ತಂತ್ರಜ್ಞಾನ ಪತ್ತೆಹಚ್ಚಿ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ನೋಟಿಫಿಕೇಶನ್ ಮೂಲಕ ಮಾಹಿತಿ ನೀಡಲಿದೆ.
ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ
ಇದೇ ವೇಳೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ–2026ಕ್ಕೆ ಪ್ರಸ್ತಾಪಿಸಿದ ಬದಲಾವಣೆಗಳಿಗೂ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಂತೆ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಮತಪತ್ರ (ಬ್ಯಾಲೆಟ್ ಪೇಪರ್) ಬಳಕೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಜಾರಿಗೊಳಿಸಿರುವಂತೆ, ಅದನ್ನು ಗ್ರಾಮ ಪಂಚಾಯತ್ ಮಟ್ಟಕ್ಕೂ ವಿಸ್ತರಿಸಲಾಗುತ್ತದೆ ಎಂದು ಪಾಟೀಲ್ ತಿಳಿಸಿದರು.
ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (SIR) ಕುರಿತ ಚರ್ಚೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.
