ಬೆಂಗಳೂರು, ಜನವರಿ 24: ರಾಜ್ಯದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆತಂಕ ಮೂಡಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕ (AQI) 165 ದಾಖಲಾಗಿದ್ದು, ಇದು ಇನ್ನೂ ಅನಾರೋಗ್ಯಕರ ಹಂತದಲ್ಲೇ ಇದೆ. ಆದರೆ, ರಾಜಧಾನಿಗಿಂತಲೂ ಹೆಚ್ಚು ಕಳಪೆ ಗಾಳಿಯನ್ನು ಹೊಂದಿರುವುದು ಬಳ್ಳಾರಿ, ಇಲ್ಲಿ AQI 224ಕ್ಕೆ ಏರಿಕೆಯಾಗಿದ್ದು, ಇದು ಗಂಭೀರ ಹಂತಕ್ಕೆ ತಲುಪಿದೆ.
ಕೆಲ ದಿನಗಳ ಹಿಂದಷ್ಟೇ ಬಳ್ಳಾರಿಯಲ್ಲಿ AQI 150ರ ಆಸುಪಾಸಿನಲ್ಲಿ ದಾಖಲಾಗಿತ್ತು. ಆದರೆ ಇಂದು ಏಕಾಏಕಿ 200ರ ಗಡಿ ದಾಟಿ 224ಕ್ಕೆ ತಲುಪಿರುವುದು ನಾಗರಿಕರಲ್ಲಿ ಆತಂಕ ಹೆಚ್ಚಿಸಿದೆ. ಕೆಲ ತಿಂಗಳ ಹಿಂದೆಯೂ ಬಳ್ಳಾರಿಯ ವಾಯು ಗುಣಮಟ್ಟ 200ರ ಗಡಿ ದಾಟಿದ್ದ ಉದಾಹರಣೆ ಇದೆ. ತಜ್ಞರ ಪ್ರಕಾರ, ಈ ಮಟ್ಟದ ಗಾಳಿಯ ಗುಣಮಟ್ಟವು ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಬೆಂಗಳೂರು ನಗರದಲ್ಲಿ ಸೂಕ್ಷ್ಮ ಕಣಗಳ (PM2.5) ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿರುವ ಮಿತಿಗಿಂತ ಐದು ಪಟ್ಟು ಅಧಿಕವಾಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡುಬಂದಿದ್ದರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ವಾಯು ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಪ್ರಮುಖ ನಗರಗಳ ಇಂದಿನ ವಾಯು ಗುಣಮಟ್ಟ (AQI):
ಬೆಂಗಳೂರು – 165
ಮಂಗಳೂರು – 169
ಮೈಸೂರು – 172
ಬೆಳಗಾವಿ – 104
ಕಲಬುರ್ಗಿ – 150
ಶಿವಮೊಗ್ಗ – 160
ಬಳ್ಳಾರಿ – 224
ಹುಬ್ಬಳ್ಳಿ – 153
ಉಡುಪಿ – 158
ವಿಜಯಪುರ – 53
ವಾಯು ಗುಣಮಟ್ಟ ಸೂಚ್ಯಂಕದ ವರ್ಗೀಕರಣ:
ಉತ್ತಮ – 0 ರಿಂದ 50
ಮಧ್ಯಮ – 50 ರಿಂದ 100
ಕಳಪೆ – 100 ರಿಂದ 150
ಅನಾರೋಗ್ಯಕರ – 150 ರಿಂದ 200
ಗಂಭೀರ – 200 ರಿಂದ 300
ಅಪಾಯಕಾರಿ – 300 ರಿಂದ 500
ರಾಜ್ಯದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ತಕ್ಷಣದ ಕ್ರಮ ಅಗತ್ಯವಿದ್ದು, ವಿಶೇಷವಾಗಿ ಕೈಗಾರಿಕಾ ಪ್ರದೇಶಗಳು ಹಾಗೂ ವಾಹನ ದಟ್ಟಣೆ ಜಾಸ್ತಿ ಇರುವ ನಗರಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

[…] ಇದನ್ನು ಓದಿ: ರಾಜ್ಯದೆಲ್ಲೆಡೆ ವಾಯು ಗುಣಮಟ್ಟ ಆತಂಕಕಾರಿ-… […]