ನವದೆಹಲಿ, ಏ.2: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾದ ಭಾರ್ತಿ ಏರ್ಟೆಲ್, ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ 650 ಮಿಲಿಯನ್ (65 ಕೋಟಿ) ಗ್ರಾಹಕರ ಗಡಿಯನ್ನು ದಾಟುವ ಮೂಲಕ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಈ ಸಾಧನೆಯೊಂದಿಗೆ, ಗ್ರಾಹಕರ ಸಂಖ್ಯೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಎಂಬ ಸ್ಥಾನವನ್ನು ಏರ್ಟೆಲ್ ಮತ್ತೊಮ್ಮೆ ಬಲಪಡಿಸಿದೆ. ಭಾರತ ಹಾಗೂ ಆಫ್ರಿಕಾದಾದ್ಯಂತ ತನ್ನ ಸೇವಾ ವಿಸ್ತರಣೆಯನ್ನು ಹೊಂದಿರುವ ಏರ್ಟೆಲ್, ಗ್ರಾಹಕ ಕೇಂದ್ರಿತ ಸೇವೆ ಮತ್ತು ವಿಶ್ವದರ್ಜೆಯ ಡಿಜಿಟಲ್ ನೆಟ್ವರ್ಕ್ ಬೆಂಬಲದಿಂದ ಈ ಐತಿಹಾಸಿಕ ಸಾಧನೆ ಮಾಡಿದೆ.
ಜಿಎಸ್ಎಂಎ ಇಂಟೆಲಿಜೆನ್ಸ್ ವರದಿಯ ಪ್ರಕಾರ, ಭಾರತ ಮತ್ತು ಆಫ್ರಿಕಾದಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿರುವ ಭಾರ್ತಿ ಏರ್ಟೆಲ್, ಮೊಬೈಲ್ ಗ್ರಾಹಕರ ಸಂಖ್ಯೆಯಲ್ಲಿ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದೆ.
ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ: ಗೋಪಾಲ್ ವಿಠ್ಠಲ್
ಈ ಸಾಧನೆ ಕುರಿತು ಮಾತನಾಡಿದ ಭಾರ್ತಿ ಏರ್ಟೆಲ್ ಕಾರ್ಯನಿರ್ವಾಹಕ ಉಪಾಧ್ಯಕ್ಷ (MD & CEO) ಗೋಪಾಲ್ ವಿಠ್ಠಲ್,
“650 ಮಿಲಿಯನ್ ಗ್ರಾಹಕರ ಮೈಲಿಗಲ್ಲು ತಲುಪಿರುವುದು ಹಾಗೂ ಜಾಗತಿಕವಾಗಿ ಎರಡನೇ ಅತಿದೊಡ್ಡ ಆಪರೇಟರ್ ಆಗಿರುವುದು ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ನಮ್ಮ ಗ್ರಾಹಕರಿಗೆ ಪ್ರತಿದಿನ ಇನ್ನೂ ಉತ್ತಮ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಅವರು ಮುಂದುವರಿಸಿ, “ನಾವು ಕೇವಲ ಸಂಪರ್ಕ ವ್ಯವಸ್ಥೆ ಒದಗಿಸುವುದಲ್ಲ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಗುಣಮಟ್ಟದ ಡಿಜಿಟಲ್ ನೆಟ್ವರ್ಕ್ ಮೂಲಕ ಗ್ರಾಹಕರ ಜೀವನವನ್ನು ಇನ್ನಷ್ಟು ಸುಲಭಗೊಳಿಸುವತ್ತ ಗಮನ ಹರಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಭಾರತದ ಏಕೈಕ ಟೆಲಿಕಾಂ ಸಂಸ್ಥೆ
ಗ್ರಾಹಕರ ವಿಶ್ವಾಸ, ತಂತ್ರಜ್ಞಾನ ವಿಸ್ತರಣೆ ಹಾಗೂ ಡಿಜಿಟಲ್ ಸೇವೆಗಳ ಬಲದಿಂದ ಭಾರತದ ಏಕೈಕ ಟೆಲಿಕಾಂ ಕಂಪನಿಯಾಗಿ ಏರ್ಟೆಲ್ ಈ ಮಟ್ಟದ ಜಾಗತಿಕ ಸಾಧನೆ ದಾಖಲಿಸಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
