ನವದೆಹಲಿ, ಫೆಬ್ರವರಿ 23, 2026: ಭಾರತದ ಪ್ರಮುಖ ದೂರಸಂಪರ್ಕ ಸೇವಾ ಪೂರೈಕೆದಾರರಲ್ಲಿ ಒಂದಾದ ಭಾರ್ತಿ ಏರ್ಟೆಲ್, ಇಂದು ತನ್ನ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆ (ಎನ್ಬಿಎಫ್ಸಿ) ಆದ ‘ಏರ್ಟೆಲ್ ಮನಿ ಲಿಮಿಟೆಡ್’ ಗೆ ಸಂಬಂಧಿಸಿದ ಬೃಹತ್ ಯೋಜನೆಗಳನ್ನು ಘೋಷಿಸಿದ್ದು, ಈ ಎನ್ಬಿಎಫ್ಸಿ ಅಂಗಸಂಸ್ಥೆಗೆ ಮುಂದಿನ ಕೆಲವು ವರ್ಷಗಳಲ್ಲಿ ₹20,000 ಕೋಟಿ ಬಂಡವಾಳವನ್ನು ಹೂಡಿಕೆ ಮಾಡಲಾಗುವುದು ಎಂಬ ಮಹತ್ವದ ಘೋಷಣೆಯನ್ನು ಮಾಡಿದೆ. ಇದರಲ್ಲಿ ಏರ್ಟೆಲ್ ಶೇಕಡ 70 ರಷ್ಟು ಪಾಲನ್ನು ಹೊಂದಿದ್ದರೆ, ಉಳಿದ ಶೇಕಡ 30 ರಷ್ಟು ಬಂಡವಾಳವನ್ನು ಭಾರ್ತಿ ಎಂಟರ್ ಪ್ರೈಸಸ್ ಲಿಮಿಟೆಡ್ ಮೂಲಕ ಪ್ರಮೋಟರ್ ಗಳ ಗುಂಪು ಭರಿಸಲಿದೆ.
ಈ ಮೂಲಕ ಏರ್ ಟೆಲ್ ಕಂಪನಿಯು ಭಾರತದಲ್ಲಿನ ಸಾಲ ಸೌಲಭ್ಯದ ಕೊರತೆಯನ್ನು ನೀಗಿಸುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಬಲಿಷ್ಠ ಡಿಜಿಟಲ್ ಆಸ್ತಿಗಳು, 500ಕ್ಕೂ ಹೆಚ್ಚು ದತ್ತಾಂಶ ವಿಜ್ಞಾನಿಗಳನ್ನು ಒಳಗೊಂಡ ಬೃಹತ್ ಡೇಟಾ ಮತ್ತು ಅನಾಲಿಟಿಕ್ಸ್ ಇಂಜಿನ್ ಹಾಗೂ ಆಳವಾದ ಕಾರ್ಯಾಚರಣೆಯ ಅನುಭವ ಹೊಂದಿರುವ ಏರ್ಟೆಲ್ ಸಂಸ್ಥೆಯು ಭಾರತದಾದ್ಯಂತ ಸರಳ, ಸುರಕ್ಷಿತ ಮತ್ತು ನವೀನ ಡಿಜಿಟಲ್ ಹಣಕಾಸು ಸೇವೆಗಳನ್ನು ವೇಗವಾಗಿ ಒದಗಿಸುವ ಗುರಿಯನ್ನು ಹೊಂದಿದೆ.
ಏರ್ಟೆಲ್ ಕಳೆದ ಎರಡು ವರ್ಷಗಳಲ್ಲಿ ತನ್ನ ಡಿಜಿಟಲ್ ಪ್ಲಾಟ್ ಫಾರ್ಮ್ ಮತ್ತು ಸೊಗಸಾಗಿ ಸಂಯೋಜಿತಗೊಂಡ ಚಾನೆಲ್ ಗಳ ಮೂಲಕ ಉನ್ನತ ದರ್ಜೆಯ ಕ್ರೆಡಿಟ್ ಇಂಜಿನ್ ಅನ್ನು ನಿರ್ಮಿಸಿದ್ದು, ಇದು ಭಾರತದ ಅತ್ಯಂತ ಶಕ್ತಿಯುತ ‘ಲೆಂಡಿಂಗ್ ಸರ್ವಿಸ್ ಪ್ರೊವೈಡರ್’ (ಎಲ್ ಎಸ್ ಪಿ) ಮಾದರಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
ಈ ಪ್ಲಾಟ್ ಫಾರ್ಮ್ ಈಗಾಗಲೇ ₹9,000 ಕೋಟಿಗೂ ಅಧಿಕ ಸಾಲ ವಿತರಿಸುವ ಮೂಲಕ ದೊಡ್ಡ ಮಟ್ಟದ ಅಳವಡಿಕೆಯನ್ನು ಸಾಧಿಸಿದೆ. ಬಲಿಷ್ಠ ಅಂಡರ್ ರೈಟಿಂಗ್ ಮಾದರಿಗಳು, ಶಿಸ್ತುಬದ್ಧ ಪೋರ್ಟ್ಫೋಲಿಯೋ ನಿರ್ವಹಣೆ ಮತ್ತು ನೈಜ ಸಮಯದ ಅಪಾಯ ಮೇಲ್ವಿಚಾರಣೆಯಿಂದಾಗಿ, ಈ ಕ್ಷೇತ್ರದಲ್ಲೇ ಅತ್ಯುತ್ತಮ ಎನ್ನಬಹುದಾದ ಸಾಲ ಮರುಪಾವತಿ ಶಿಸ್ತಿನ ಫಲಿತಾಂಶಗಳನ್ನು ಹೊಂದಿದೆ.
ಈ ಕುರಿತು ಮಾತನಾಡಿರುವ ಭಾರ್ತಿ ಏರ್ ಟೆಲ್ ನ ಕಾರ್ಯನಿರ್ವಾಹಕ ವೈಸ್ ಚೇರ್ಮನ್ ಗೋಪಾಲ್ ವಿಟ್ಟಲ್ ಅವರು, “ಕಳೆದ ಎರಡು ವರ್ಷಗಳಲ್ಲಿ ನಮ್ಮ ಎಲ್ಎಸ್ಪಿ ಪ್ಲಾಟ್ ಫಾರ್ಮ್ ನ ಯಶಸ್ಸು, ತಂತ್ರಜ್ಞಾನ, ಡೇಟಾ ಮತ್ತು ಗ್ರಾಹಕರ ವಿಶ್ವಾಸದ ಮೂಲಕ ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರುವ ನಮ್ಮ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ನಾವು ಭಾರತದ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಕ್ರೆಡಿಟ್ ಇಂಜಿನ್ ಗಳಲ್ಲಿ ಒಂದನ್ನು ನಿರ್ಮಿಸಿದ್ದೇವೆ. ನಮ್ಮ ಎನ್ಬಿಎಫ್ಸಿ ವೇದಿಕೆಯು ಈ ಅಡಿಪಾಯವನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ನವೀನ ಹಾಗೂ ಆರ್ಥಿಕ ಒಳಗೊಳ್ಳುವಿಕೆಗೆ ಪೂರಕವಾದ ಡಿಜಿಟಲ್ ಸಾಲ ವ್ಯವಹಾರವನ್ನು ನಿರ್ಮಿಸುವ ನಮ್ಮ ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಏರ್ಟೆಲ್ ಮನಿ ಫೆಬ್ರವರಿ 13, 2026 ರಂದು ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಎನ್ಬಿಎಫ್ಸಿ ಪರವಾನಗಿಯನ್ನು ಪಡೆದಿದೆ.
ಭಾರತದ ವೇಗವಾಗಿ ಬೆಳೆಯುತ್ತಿರುವ ಹಣಕಾಸು ಸೇವಾ ವಲಯದಲ್ಲಿನ ಈ ಬೆಳವಣಿಗೆಯು, ಏರ್ಟೆಲ್ ನ ಆರ್ಥಿಕ ಒಳಗೊಳ್ಳುವಿಕೆಯ ಬದ್ಧತೆಯನ್ನು ತೋರಿಸುತ್ತದೆ. ಕೇರ್ ಎಡ್ಜ್ ರೇಟಿಂಗ್ಸ್ ಪ್ರಕಾರ, ಭಾರತದಲ್ಲಿ ಜಿಡಿಪಿಗೆ ಸಾಲದ ಅನುಪಾತವು ಶೇಕಡ 53 ರಷ್ಟಿದ್ದು, ಇದು ದೇಶದಲ್ಲಿ ಸಾಲ ವಿತರಣೆಗೆ ಇರುವ ದೊಡ್ಡ ಅವಕಾಶವನ್ನು ಸೂಚಿಸುತ್ತದೆ.
ಈ ಬೆಳವಣಿಗೆಯು ಏರ್ ಟೆಲ್ ನ ಬೃಹತ್ ಗ್ರಾಹಕ ಬಳಕೆಯನ್ನು ಬಳಸಿಕೊಂಡು ಕಂಪನಿಯ ಮುಂದಿನ ಬೆಳವಣಿಗೆಯ ಎಂಜಿನ್ ಅನ್ನು ನಿರ್ಮಿಸಲು ಮತ್ತು ಅದರ ಪೋರ್ಟ್ಫೋಲಿಯೊವನ್ನು ವೈವಿಧ್ಯಗೊಳಿಸಲು ಸಹಕಾರಿಯಾಗಿದೆ. ಎನ್ಬಿಎಫ್ಸಿಯ ಸಾಲ ವಿತರಣಾ ಪ್ರಕ್ರಿಯೆಯು ಎಲ್ಎಸ್ಪಿ ಪ್ಲಾಟ್ಫಾರ್ಮ್ ನೊಂದಿಗೆ ಸುಗಮವಾಗಿ ಸಂಯೋಜನೆಗೊಳ್ಳಲಿದ್ದು, ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ.ತಂತ್ರಜ್ಞಾನ, ಡೇಟಾ, ಗ್ರಾಹಕರ ಅರ್ಥೈಸುವಿಕೆಯನ್ನು ಸಂಯೋಜಿಸಿ ಏರ್ ಟೆಲ್ ಸಂಸ್ಥೆಯು ಭಾರತದ ಡಿಜಿಟಲ್ ಹಣಕಾಸು ಸೇವಾ ವಿಭಾಗದಲ್ಲಿ ಹೊಸ ಮಾನದಂಡ ಹಾಕುವ ಉದ್ದೇಶ ಹೊಂದಿದೆ.
ಪರವಾನಗಿ ನೀಡುವ ಸಂದರ್ಭದಲ್ಲಿ ಆರ್ಬಿಐ ಸೂಚನೆಯಂತೆ ಕಂಪನಿಯು ಈ ಕೆಳಗಿನ ಡಿಸ್ ಕ್ಲೈಮರ್/ ಹೇಳಿಕೆಯನ್ನು ಸಲ್ಲಿಸುತ್ತಿದೆ:
“ಕಂಪನಿಯು ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ, 1934 ರ ಸೆಕ್ಷನ್ 45 ಐಎ ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ 13/02/2026 ರ ದಿನಾಂಕದ ಮಾನ್ಯ ನೋಂದಣಿ ಪ್ರಮಾಣಪತ್ರವನ್ನು ಹೊಂದಿದೆ. ಆದಾಗ್ಯೂ, ಕಂಪನಿಯ ಹಣಕಾಸಿನ ಸದೃಢತೆಯ ಬಗ್ಗೆ ಅಥವಾ ಕಂಪನಿಯು ಮಾಡಿದ ಯಾವುದೇ ಹೇಳಿಕೆಗಳು ಅಥವಾ ಪ್ರಾತಿನಿಧ್ಯಗಳ ನಿಖರತೆ ಮತ್ತು ಠೇವಣಿಗಳ ಮರುಪಾವತಿ/ ಹೊಣೆಗಾರಿಕೆಗಳ ವಿಲೇವಾರಿ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ಜವಾಬ್ದಾರಿ ಅಥವಾ ಬಾಧ್ಯತೆಯನ್ನು ಹೊಂದಿರುವುದಿಲ್ಲ.”
