ಬೆಂಗಳೂರು: ಒಂದು ಬಾರಿಗೆ ಬಳಕೆಯಾಗುವ ಪಾಸ್ವರ್ಡ್ (ಒಟಿಪಿ) ಆಧರಿಸಿ ನಡೆಯುವ ಬ್ಯಾಂಕಿಂಗ್ ವಂಚನೆಗಳನ್ನು ತಡೆಯುವ ಉದ್ದೇಶದಿಂದ ಏರ್ಟೆಲ್ ಕಂಪನಿಯು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಹೊಸ ಭದ್ರತಾ ಸೇವೆಯನ್ನು ಆರಂಭಿಸಿದೆ.
ಇತ್ತೀಚೆಗೆ ವಂಚಕರು ತುರ್ತು ಪರಿಸ್ಥಿತಿ ಸೃಷ್ಟಿಸುವ ಮೂಲಕ ಅಮಾಯಕರಿಗೆ ಕರೆ ಮಾಡಿ ಬ್ಯಾಂಕಿಂಗ್ ವಹಿವಾಟಿನ ಒಟಿಪಿ ಕೇಳುವುದು ಸಾಮಾನ್ಯವಾಗಿದೆ. ಒಟಿಪಿ ಪಡೆದ ಬಳಿಕ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡುವ ಘಟನೆಗಳು ಹೆಚ್ಚಾಗಿವೆ.
ಇಂತಹ ಅಪಾಯಕಾರಿ ಸನ್ನಿವೇಶಗಳನ್ನು ಗುರುತಿಸಲು ಏರ್ಟೆಲ್ನ ಎಐ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸಂಶಯಾಸ್ಪದ ಕರೆ ನಡೆಯುವ ಸಂದರ್ಭದಲ್ಲಿ ಬ್ಯಾಂಕ್ ಒಟಿಪಿ ಮೊಬೈಲ್ಗೆ ಬಂದರೆ, ಅದನ್ನು ಇತರರಿಗೆ ಹಂಚಿಕೊಳ್ಳಬಾರದು ಎಂಬ ಎಚ್ಚರಿಕೆಯನ್ನು ಈ ವ್ಯವಸ್ಥೆ ಗ್ರಾಹಕರಿಗೆ ನೀಡುತ್ತದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.
“ಎಐ ಆಧಾರಿತವಾಗಿ ಅಭಿವೃದ್ಧಿಪಡಿಸಿರುವ ಈ ಹೊಸ ವ್ಯವಸ್ಥೆ ವಂಚನಾ ಉದ್ದೇಶದ ಚಟುವಟಿಕೆಗಳನ್ನು ಗುರುತಿಸಿ ಗ್ರಾಹಕರನ್ನು ಎಚ್ಚರಿಸುವಂತೆ ವಿನ್ಯಾಸಗೊಳಿಸಲಾಗಿದೆ. ವ್ಯಾಪಕ ಪರೀಕ್ಷೆಗಳ ಬಳಿಕ ಇದು ಗಣನೀಯ ಪ್ರಮಾಣದ ನಿಖರತೆಯನ್ನು ತೋರಿಸಿದೆ,” ಎಂದು ಏರ್ಟೆಲ್ ಸಿಇಒ ಶಾಶ್ವತ್ ಶರ್ಮ ತಿಳಿಸಿದ್ದಾರೆ.
ಈ ಸೇವೆಯ ಮೂಲಕ ಬ್ಯಾಂಕಿಂಗ್ ವಂಚನೆ ಪ್ರಕರಣಗಳನ್ನು ಕಡಿಮೆ ಮಾಡಲು ಸಾಧ್ಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
