ಬೆಂಗಳೂರು, ಜುಲೈ 5: ಬೆಂಗಳೂರು ಕೆಂಗೇರಿಯ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಆಯೋಜಿಸಲಾಗಿದ್ದ ವಿಶೇಷ ಆಶಾಡ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಅಂತರಾಷ್ಟ್ರೀಯ ಖ್ಯಾತಿಯ ಭರತನಾಟ್ಯ ಕಲಾವಿದೆ ಡಾ. ಸ್ವಾತಿ ಪಿ. ಭಾರದ್ವಾಜ್ ಅವರು ತಮ್ಮ 1130ನೇ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವನ್ನು ಯಶಸ್ವಿಯಾಗಿ ನಿಭಾಯಿಸಿದರು.
ಭಾರತೀಯ ಸಂಗೀತ ನೃತ್ಯ ಕಲಾವಿದರ ಒಕ್ಕೂಟ ಹಾಗೂ ಶ್ರೀ ಕಾಳಿಕಾಂಬ ದೇವಾಲಯದ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 45 ನಿಮಿಷಗಳ ಸುದೀರ್ಘ ನೃತ್ಯಾವಳಿಯನ್ನು ಪ್ರಸ್ತುತಪಡಿಸಿದ ಡಾ. ಸ್ವಾತಿ ಅವರು ತಮ್ಮ ಪ್ರದರ್ಶನವನ್ನು ದೇವಾಲಯದ ದೇವಿ ಕಾಳಿಕಾಂಬ ಅಮ್ಮನವರ ಪಾದಾರವಿಂದಗಳಿಗೆ ಸಮರ್ಪಿಸಿದರು.
ಡಾ. ಸ್ವಾತಿ ಅವರು ಗಿನ್ನಿಸ್ ದಾಖಲೆ ವಿಜೇತರೂ ಆಗಿದ್ದು, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಒಕ್ಕೂಟದ ಖಜಾಂಚಿಯಾಗಿರುವ ಶ್ರೀಮತಿ ಮಮತಾ ಅವರು ಡಾ. ಸ್ವಾತಿಯನ್ನು ಗೌರವಿಸಿ ಅಭಿನಂದನೆ ಸಲ್ಲಿಸಿದರು.
– ಮಂಜುನಾಥ್ ಐ.ಕೆ

[…] ಅಖಂಡ ಭರತನಾಟ್ಯ ಪ್ರದರ್ಶನ: 1130ನೇ ವೈಯಕ್ತಿಕ … […]