ಇತ್ತೀಚೆಗೆ ನಡೆದ ಎರಡು ವಿಭಿನ್ನ ಹಾಗೂ ಮನಸ್ಸನ್ನು ತೀವ್ರವಾಗಿ ಕಾಡುವ ಘಟನೆಗಳು ಸಮಾಜದ ಮುಂದೆ ಅನೇಕ ಪ್ರಶ್ನೆಗಳನ್ನು ಎತ್ತಿ ನಿಲ್ಲಿಸಿವೆ. ಒಂದು ಘಟನೆಯಲ್ಲಿ, ದೇಶ ಕಾಯುವ ಹೆಣ್ಣು ಮಗಳು ತನ್ನ ಗಂಡನ ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿ ಗುಂಡೇಟಿಗೆ ಬಲಿಯಾಗಿದ್ದಾಳೆ. ಮತ್ತೊಂದು ಘಟನೆಯಲ್ಲಿ, ಉನ್ನತ ಶಿಕ್ಷಣ ಪಡೆದ ಸಾಫ್ಟ್ವೇರ್ ಇಂಜಿನಿಯರ್ ತಾಯಿ, ಹಾಸ್ಟೆಲ್ನಲ್ಲಿ ಓದುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಎರಡೂ ಪ್ರಕರಣಗಳಲ್ಲಿ ಹೆಣ್ಣು ಓದಿದವಳು, ಸಮರ್ಥಳು, ಆರ್ಥಿಕವಾಗಿ ಸ್ವಾವಲಂಬಿ. ಆದರೂ ಇಂತಹ ಅತಿದಾರುಣ ಅಂತ್ಯಕ್ಕೆ ತಲುಪಬೇಕಾದರೆ ಕಾರಣವೇನು? ಯಾಕೆ ಅವಳು ಇಂತಹ ಪರಿಸ್ಥಿತಿಯನ್ನು ಎದುರಿಸಲು ಅಸಮರ್ಥಳಾದಳು ಎಂಬ ಪ್ರಶ್ನೆ ಮನಸ್ಸನ್ನು ಕಾಡುತ್ತದೆ.
ಹೌದು…. ಭಾರತದಂತ ದೇಶದಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆ. ಅವಳನ್ನು ಶಕ್ತಿ ಸ್ವರೂಪಳು ಎಂದು ಆರಾಧಿಸುವ ಇಲ್ಲಿ ಅವಳು ದೈವಿ ಸ್ವರೂಪಳು. ಆದರೆ ವಾಸ್ತವದಲ್ಲಿ ಅವಳ ಸ್ಥಿತಿ ಸಂಪೂರ್ಣ ವಿರುದ್ಧವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಎಷ್ಟೇ ಓದಿದರೂ, ಎಷ್ಟೇ ಸಾಧನೆ ಮಾಡಿದರೂ, ಆರ್ಥಿಕವಾಗಿ ಬಲಿಷ್ಠಳಾದರೂ ಸಹ ಅವಳು ಮಾನಸಿಕವಾಗಿ ಹೆಚ್ಚು ಕುಗ್ಗುತ್ತಾಳೆ. ನಿರಂತರ ಶೋಷಣೆ, ಅವಮಾನ, ನಿರ್ಲಕ್ಷ್ಯ ಅವಳ ಭಾವನೆಗಳ ಮೇಲೆ ಪ್ರತಿ ದಿನ ಕೊಡಲಿ ಪೆಟ್ಟು ಬೀಳುವಂತೆ ಮಾಡುತ್ತಲೇ ಇರುತ್ತದೆ.
ಮದುವೆ ಎಂಬ ಬಂಧನದಲ್ಲಿ ಸಿಲುಕುವ ಹೆಣ್ಣಿಗೆ ಬೇಕಾಗಿರುವುದು ಆಡಂಬರದ ಬದುಕಲ್ಲ; ಅವಳಿಗೆ ಬೇಕಾಗಿರುವುದು ಜೀವಿಸುವ ಭದ್ರತೆ.
ದೇಶ ಕಾಯುವ ಆ ಹೆಣ್ಣು ತನ್ನ ಗಂಡನನ್ನು ಎದುರಿಸಲಾಗದೇ ಸಾವನ್ನಪ್ಪಿದಳೇ?
ಉತ್ತಮ ವಿದ್ಯಾಭ್ಯಾಸ, ವೃತ್ತಿಜೀವನ ಹೊಂದಿದ್ದ ತಾಯಿ ತನ್ನ ಮಕ್ಕಳೊಂದಿಗೆ ಆತ್ಮಹ*ತ್ಯೆ ಮಾಡಿಕೊಳ್ಳುವಷ್ಟು ದುರ್ಬಲಳಾದಳೇ?
ಇಲ್ಲಿ ಇವರಿಬ್ಬರಿಗೂ ಕೊರತೆಯಾಗಿದ್ದದ್ದು ಹಣವೇ?
ಅಥವಾ “ನಾನು ಇದ್ದೇನೆ ನಿನ್ನ ಜೊತೆ” ಎಂದು ಧೈರ್ಯ ತುಂಬುವ ಒಬ್ಬ ಆಸರೆಯೇ?
ಒಂದು ಹೆಣ್ಣಿಗೆ ಅತ್ಯಂತ ಅಗತ್ಯವಾದುದು ಮಾನಸಿಕ ಭದ್ರತೆ. ತನ್ನವರಿಗಾಗಿ, ತಾನು ಪ್ರೀತಿಸುವ ಜೀವಗಳಿಗಾಗಿ ಅವಳು ಏನನ್ನಾದರೂ ತ್ಯಾಗ ಮಾಡಬಲ್ಲಳು.
ಮಾಸಿಕ ನೋವು, ಹೆರಿಗೆ ಯಾತನೆ, ಮನೆ ಮತ್ತು ಕಚೇರಿ ಜವಾಬ್ದಾರಿಗಳು—ಎಲ್ಲವನ್ನೂ ನಿಭಾಯಿಸುವ ಹೆಣ್ಣು ಒಳಗೊಳಗೇ ಕುಗ್ಗುತ್ತಿರುತ್ತಾಳೆ.
ಆ ಸಮಯದಲ್ಲಿ ಅವಳಿಗೆ ಬೇಕಾಗುವುದು ದೊಡ್ಡ ಉಪದೇಶಗಳಲ್ಲ.

ಒಂದಿಷ್ಟು ಅಕ್ಕರೆ.
ಒಂದಿಷ್ಟು ಪ್ರೀತಿ.
ಒಂದಿಷ್ಟು ಕಾಳಜಿ.
ಒಂದಿಷ್ಟು ಪ್ರೀತಿಯ ಸ್ಪರ್ಶ ಅಷ್ಟೇ.
ತೇಜಸ್ವಿಯವರು ಹೇಳಿದಂತೆ, ಬದುಕು ಹೋರಾಟದ ಪ್ರತಿಫಲ. ಆದರೆ ಆ ಹೋರಾಟ ಬದುಕುವುದಕ್ಕಾಗಿ ಇರಬೇಕು—ಸಾಯುವುದಕ್ಕಾಗಿ ಅಲ್ಲ.
ವಿಶೇಷವಾಗಿ ಹೆಣ್ಣಿಗೆ….. ಬದುಕಲು ಆಸರೆ ಬೇಕು ……..ಒಂದಿಷ್ಟು ಪ್ರೀತಿ ಕೊಡಿ…ಒಂದಿಷ್ಟು ಅಕ್ಕರೆ ತೋರಿಸಿ…ಅವಳನ್ನು ಉಳಿಸಿಕೊಳ್ಳಿ.
-ಮೌನಾತ್ಮ
