ಬೆಂಗಳೂರು: ಇನ್ನು ಎರಡು ವರ್ಷಗಳಲ್ಲಿ ರಾಜ್ಯದ ಎಲ್ಲ ಗ್ರಾಮಗಳ ಸರ್ವೆ ನಡೆಸಿ, ಪೋಡಿ ಮುಕ್ತ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ನೌಕರರ ಸಂಘಗಳು ಆಯೋಜಿಸಿದ್ದ 36ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ರೈತರು ನೆಮ್ಮದಿಯಾಗಿ ಕೃಷಿ ಉತ್ಪಾದನೆಯಲ್ಲಿ ತೊಡಗಬೇಕಾದರೆ ಸರ್ವೆ ಕಾರ್ಯ ಸರಿಯಾಗಿ ಪೂರ್ಣಗೊಳ್ಳಬೇಕು. ಕೆರೆ ಕಟ್ಟೆಗಳ ಒತ್ತುವರಿ ತೆರವುಗೊಳಿಸಬೇಕು. ಪೋಡಿ ಮುಕ್ತ ಗ್ರಾಮಗಳಾಗಬೇಕು. ಇಲ್ಲವಾದರೆ ಗ್ರಾಮಗಳಲ್ಲಿ ಜಮೀನಿಗೆ ಸಂಬಂಧಿಸಿದ ವ್ಯಾಜ್ಯಗಳು, ಅಪರಾಧಗಳು ಹೆಚ್ಚಾಗುತ್ತವೆ, ಇದಕ್ಕಾಗಿ ಇಲಾಖೆಯ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಶ್ರಮಿಸಿ, ಧ್ವನಿ ಇಲ್ಲದವರ ಪರವಾಗಿ ಕೆಲಸ ಮಾಡಬೇಕು. ಇದುವೇ ನಿಜವಾದ ಪುಣ್ಯದ ಕಾರ್ಯ’ ಎಂದು ಅವರು ಹೇಳಿದರು.
ಪರವಾನಗಿ ಹೊಂದಿದ 1,227 ಭೂಮಾಪಕರನ್ನು ಕಾಯಂ ಮಾಡಲಾಗುವುದು ಅಲ್ಲದೇ, 36 ಎಡಿಎಲ್ಆರ್ (ಭೂ ದಾಖಲೆಯ ಸಹಾಯ ನಿರ್ದೇಶಕ) ನೇಮಕ ಮಾಡಲಾಗುವುದು. ಕಂದಾಯ ಇಲಾಖೆ ರೈತರಿಗೆ ಸಂಬಂಧಿಸಿದ ಕೆಲಸಗಳನ್ನೇ ಮಾಡುತ್ತದೆ. ಇದಕ್ಕೆ ಹಣ ಕೊರತೆ ಇಲ್ಲ. ಅಗತ್ಯವಿರುವಷ್ಟು ಹಣ ಕೊಟ್ಟಿದ್ದೇವೆ. ಮುಂದೆಯೂ ಕೊಡುತ್ತೇವೆ’ ಎಂದು ಹೇಳಿದರು.
ಖಾಲಿ ಇರುವ ಎಲ್ಲಾ ಸರ್ವೆಯರ್ ಹುದ್ದೆಗಳ ನೇಮಕಾತಿ ಪಾರದರ್ಶಕವಾಗಿ ನಡೆದಿದೆ. ಸದ್ಯದಲ್ಲೇ ನೇಮಕಾತಿ ಪತ್ರವನ್ನೂ ಕೊಡುತ್ತೇವೆ. ಹಿಂದೆ ಗೋವಿಂದೇಗೌಡರು ಪ್ರಾಮಾಣಿಕವಾಗಿ ಒಂದು ಲಕ್ಷ ಶಿಕ್ಷಕರ ನೇಮಕಾತಿ ಮಾಡಿದ ರೀತಿಯಲ್ಲೇ ಕೃಷ್ಣಬೈರೇಗೌಡರು ಸರ್ವೆಯರ್ಗಳ ನೇಮಕಾತಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
