ಅಲಹಾಬಾದ್: ಬೇರೆ ಬೇರೆ ಧರ್ಮಗಳನ್ನು ಅನುಸರಿಸುವ ವ್ಯಕ್ತಿಗಳು ಪರಸ್ಪರ ಮತಾಂತರವಿಲ್ಲದೆ ಮದುವೆಯಾದರೆ, ಆ ವಿವಾಹವನ್ನು ಕಾನೂನುಬದ್ಧವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ನೀಡಿದೆ.
ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ಅಂತರ್ಧರ್ಮೀಯ ವಿವಾಹಗಳಿಗೆ ಮಾನ್ಯತೆ ನೀಡುತ್ತಿರುವ ಆರ್ಯ ಸಮಾಜ ಸಂಸ್ಥೆಗಳ ವಿರುದ್ಧ ತನಿಖೆ ನಡೆಸುವಂತೆ ರಾಜ್ಯ ಗೃಹ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ತನಿಖೆಯನ್ನು ಡಿಸಿಪಿ ಮಟ್ಟದ ಐಪಿಎಸ್ ಅಧಿಕಾರಿಗಳ ಮೂಲಕ ನಡೆಸಬೇಕೆಂದು ನ್ಯಾಯಪೀಠ ಸೂಚಿಸಿದೆ.
ಕೋರ್ಟ್ ಹೇಳಿಕೆಯು ಹೀಗಿದೆ: “ಆರ್ಯ ಸಮಾಜ ಸಂಸ್ಥೆಗಳು ಧಾರ್ಮಿಕ ಆವರಣದಲ್ಲಿ ಯಾವುದೇ ನಿಯಮ ಪಾಲಿಸದೆ ನಿರ್ದಿಷ್ಟ ಶುಲ್ಕಕ್ಕಾಗಿ ಮನಬಂದಂತೆ ಮದುವೆ ಪ್ರಮಾಣ ಪತ್ರ ನೀಡುತ್ತಿವೆ. ಇದು ಕಾನೂನುಬಾಹಿರವಾಗಿದೆ.“
ಸೋನು ಅಲಿಯಾಸ್ ಸಹನೂರ್ ಎಂಬ ಆರೋಪಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣ ರದ್ದುಪಡಿಸಬೇಕೆಂಬ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದು, ಅಪ್ರಾಪ್ತೆಯ ಮದುವೆ ಹಾಗೂ ವಧು-ವರರ ಮತಾಂತರದ ಅಗತ್ಯವಿಲ್ಲದೆ ವಿವಾಹ ನಡೆಸಿದ prakriye ಕಾನೂನು ಉಲ್ಲಂಘನೆ ಎಂದು ಉಲ್ಲೇಖಿಸಲಾಗಿದೆ.
