ಬೆಂಗಳೂರು, ಜನವರಿ 19: ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (Directorate of Civil Rights Enforcement) ನಿರ್ದೇಶಕ ಮಹಾನಿರ್ದೇಶಕರಾಗಿರುವ ಡಾ. ಕೆ. ರಾಮಚಂದ್ರ ರಾವ್ (ಕೆಎನ್:1993) ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದಲೇ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಸಾರ್ವಜನಿಕ ಸುದ್ದಿ ವಾಹಿನಿಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಗೊಂಡಿರುವ ವಿಡಿಯೋಗಳು ಮತ್ತು ವರದಿಗಳ ಆಧಾರದ ಮೇಲೆ, ಡಾ. ಕೆ. ರಾಮಚಂದ್ರ ರಾವ್ ಅವರು ಸರ್ಕಾರಿ ಸೇವಕರಿಗೆ ಶೋಭೆಯಲ್ಲದ ಹಾಗೂ ಅಶ್ಲೀಲ ರೀತಿಯ ವರ್ತನೆ ತೋರಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಅವರ ವರ್ತನೆಯು ಸರ್ಕಾರಕ್ಕೆ ಮುಜುಗರ ಉಂಟುಮಾಡುವಂತಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ರಾಜ್ಯ ಸರ್ಕಾರ ಈ ವಿಚಾರವನ್ನು ಪರಿಶೀಲಿಸಿ, ಆಲ್ ಇಂಡಿಯಾ ಸರ್ವೀಸಸ್ (Conduct) Rules, 1968ರ ನಿಯಮ 3ರ ಉಲ್ಲಂಘನೆ ನಡೆದಿದೆ ಎಂಬುದಾಗಿ ಪ್ರಾಥಮಿಕವಾಗಿ ತೃಪ್ತಿಯಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಡಾ. ಕೆ. ರಾಮಚಂದ್ರ ರಾವ್ ಅವರನ್ನು ಅಮಾನತುಗೊಳಿಸುವುದು ಅಗತ್ಯವೆಂದು ನಿರ್ಧರಿಸಿದೆ.
ಈ ಸಂಬಂಧ ಡಿಪಿಎಆರ್/26/ಎಸ್ಪಿಎಸ್/2026 ಸಂಖ್ಯೆಯ ಸರ್ಕಾರಿ ಆದೇಶವನ್ನು ಬೆಂಗಳೂರು ದಿನಾಂಕ 19 ಜನವರಿ 2026ರಂದು ಹೊರಡಿಸಲಾಗಿದೆ. ಆಲ್ ಇಂಡಿಯಾ ಸರ್ವೀಸ್ (Discipline & Appeal) Rules, 1969ರ ನಿಯಮ 3(1)(a) ಅಡಿಯಲ್ಲಿ ಈ ಅಮಾನತು ಆದೇಶ ಜಾರಿಗೊಂಡಿದೆ.
ಅಮಾನತು ಅವಧಿಯಲ್ಲಿ, ಸಂಬಂಧಿತ ನಿಯಮಾವಳಿಗಳ ಪ್ರಕಾರ ಡಾ. ಕೆ. ರಾಮಚಂದ್ರ ರಾವ್ ಅವರಿಗೆ ಜೀವನಾಧಾರ ಭತ್ಯೆ (subsistence allowance) ಪಾವತಿಸಲಾಗುವುದು. ಅಲ್ಲದೆ, ರಾಜ್ಯ ಸರ್ಕಾರದ ಲಿಖಿತ ಅನುಮತಿಯಿಲ್ಲದೆ ಯಾವುದೇ ಸಂದರ್ಭದಲ್ಲೂ ಮುಖ್ಯಾಲಯವನ್ನು ತೊರೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಆದೇಶದ ಪ್ರತಿಯನ್ನು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಗೃಹ ಸಚಿವಾಲಯ, ರಾಜ್ಯದ ಮಹಾಲೇಖಾಪಾಲರು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ಕ್ರಮಗಳ ಬಗ್ಗೆ ಸರ್ಕಾರದ ಆದೇಶವನ್ನು ಕಾಯಲಾಗುತ್ತಿದೆ.

