ಚಿತ್ರದುರ್ಗ, ಏಪ್ರಿಲ್ 11: ಜಿಲ್ಲೆಯ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಪೊಲೀಸ್ ಸಿಬ್ಬಂದಿಗಳನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಸುಡು ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಮಾಹಿತಿಯ ಪ್ರಕಾರ, ಏಪ್ರಿಲ್ 5ರಂದು ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 12 ಮಂದಿ ಸಿಬ್ಬಂದಿಯನ್ನು ಠಾಣೆಯ ಪಿಎಸ್ಐ ನೇತ್ರಾವತಿ ಅವರು ಬಿಸಿಲಿನಲ್ಲಿ ನಿಲ್ಲಿಸಿ ಶಿಕ್ಷೆ ನೀಡಿದರೆಂದು ಆರೋಪಿಸಲಾಗಿದೆ. ದೀರ್ಘ ಕಾಲ ಬಿಸಿಲಿನಲ್ಲಿ ನಿಂತಿದ್ದರಿಂದ ಕೆಲ ಸಿಬ್ಬಂದಿಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ತೀವ್ರ ಸುಸ್ತು ಹಾಗೂ ಡಿಹೈಡ್ರೇಶನ್ ಸಮಸ್ಯೆಯಿಂದ ಬಳಲಿದ ಅವರನ್ನು ತಕ್ಷಣವೇ ಹೊಳಲ್ಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ನೊಂದ ಸಿಬ್ಬಂದಿಗಳು, ಪಿಎಸ್ಐ ಅವರ ವರ್ತನೆ ಮತ್ತು ತಮಗೆ ನೀಡಲಾದ ಅಮಾನವೀಯ ಶಿಕ್ಷೆಯ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ , “ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಸಿಬ್ಬಂದಿಗಳ ವಿರುದ್ಧ ಇಲಾಖಾ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳಬಹುದು. ಆದರೆ ಇಂತಹ ರೀತಿಯ ಶಿಕ್ಷೆ ನೀಡುವುದು ಸರಿಯಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ” ಎಂದು ತಿಳಿಸಿದ್ದಾರೆ.
ಇದೀಗ ಘಟನೆಯ ಸಮಗ್ರ ತನಿಖೆಗೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು, ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
