ಆಲೂರು: ರೈತರು ಯೂರಿಯ ಗೊಬ್ಬರದ ಬದಲು ನ್ಯಾನೊ ಯೂರಿಯ ಮತ್ತು ನ್ಯಾನೊ ಡಿಎಪಿ ದ್ರವರೂಪ ಬಳಕೆ ಮಾಡಬೇಕು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ಕುಮಾರ್ ತಿಳಿಸಿದರು.
ತಾಲ್ಲೂಕಿನಲ್ಲಿರುವ ರಸಗೊಬ್ಬರ ದಾಸ್ತಾನು ಗೋದಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಮಳೆ ಹೆಚ್ಚಾಗಿರುವುದರಿಂದ ಮುಸುಕಿನ ಜೋಳ, ಕಾಫಿ ಬೆಳೆಗಳಿಗೆ ಹೆಚ್ಚು ಶೀತವಾಗಿದೆ. ರೈತರು ಪುನರಾವರ್ತನೆಯಾಗಿ ಯೂರಿಯ ರಸಗೊಬ್ಬರವನ್ನು ಬಳಕೆ ಮಾಡುತ್ತಿರುವುದು ತಪ್ಪು.
ಯೂರಿಯ ರಸಗೊಬ್ಬರದ ಬದಲು ಈಗ ನ್ಯಾನೊ ಯೂರಿಯ ಮತ್ತು ನ್ಯಾನೊ ಡಿಎಪಿ ದ್ರವರೂಪ ಬಂದಿದೆ. ಇದನ್ನು ಕೃಷಿಯಲ್ಲಿ ಬಳಸುವುದರಿಂದ ಶೀತವನ್ನು ತಡೆಯುತ್ತದೆ. ಇದರಿಂದ ಯೂರಿಯ ರಸಗೊಬ್ಬರದ ಬಳಕೆ ತಗ್ಗಿಸಬಹುದು.
ಮುಖ್ಯಮಂತ್ರಿಗಳ ನಿರ್ದೇಶನದಂತೆ ಯೂರಿಯ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ತಾಲ್ಲೂಕಿನಲ್ಲಿ 2804 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆ ಇದೆ. ಅದರಲ್ಲಿ ಈಗಾಗಲೆ 2600 ಮೆಟ್ರಿಕ್ ಟನ್ ಗೊಬ್ಬರ ಬಂದಿದ್ದು ರೈತರಿಗೆ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಭತ್ತ ನಾಟಿ ಮಾಡುವ ಸಂದರ್ಭದಲ್ಲಿ ರಸಗೊಬ್ಬರದ ಅವಶ್ಯವಿದೆ. ಸದ್ಯದಲ್ಲೆ ಉಳಿದ ಗೊಬ್ಬರ ಬರುತ್ತದೆ. ರೈತರು ಭಯಪಡುವುದು ಬೇಡ ಎಂದರು.
ಗೋದಾಮುಗಳ ಪರಿಶೀಲನೆ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ರೆಡ್ಡಿ, ಕೃಷಿ ಅಧಿಕಾರಿ ಮಹಾಂತೇಶ್ ಹಾಜರಿದ್ದರು.

[…] […]