ಹಾಸನ ಜಿಲ್ಲೆ ಆಲೂರು ತಾಲೂಕಿನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ಆರ್ಟಿಸಿ ತಪಾಸಣಾಧಿಕಾರಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಹೊಸ ಮಾಹಿತಿ ಬಹಿರಂಗವಾಗಿದೆ. ಅಪಘಾತಕ್ಕೊಳಗಾದ ಲಾರಿಯಲ್ಲಿ ಏನಿದೆ ಎಂಬುದು ಮೊದಲಿಗೆ ತಿಳಿದಿರಲಿಲ್ಲ. ಆದರೆ ನಂತರ ಆಲೂರು ಪೊಲೀಸರು ಲಾರಿಯನ್ನು ಪರಿಶೀಲಿಸಿದಾಗ, ಬಡವರಿಗೆ ವಿತರಿಸಬೇಕಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಚೀಲಗಳು ಪತ್ತೆಯಾಗಿವೆ.
ಆಲೂರು ಪೊಲೀಸ್ ಠಾಣೆ ಎದುರು ನಿಲ್ಲಿಸಿದ್ದ ಲಾರಿಯಲ್ಲಿ 50 ಕೆಜಿ ತೂಕದ ಸುಮಾರು 217 ಚೀಲ ಅನ್ನಭಾಗ್ಯ ಅಕ್ಕಿ ಇದ್ದು, ಆಹಾರ ಇಲಾಖೆಯ ಸಿಬ್ಬಂದಿಯ ಸಹಕಾರದೊಂದಿಗೆ ಅಕ್ಕಿಯನ್ನು ಕೆಳಗಿಳಿಸಿ ಪರಿಶೀಲಿಸಲಾಗಿದೆ. ಈ ಸಂಬಂಧ ಆಹಾರ ಇಲಾಖೆ ಈಗಾಗಲೇ ಆಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಕ್ಕಿಯನ್ನು FSL (FSi) ಪರೀಕ್ಷೆಗೆ ಒಳಪಡಿಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಲಾರಿ ಮಂಗಳೂರಿನಿಂದ ಬನ್ನೂರಿಗೆ ಅಕ್ಕಿ ಸಾಗಿಸುತ್ತಿತ್ತು ಎನ್ನಲಾಗಿದೆ. ಬಡವರಿಗಾಗಿ ಮೀಸಲಾದ ಅನ್ನಭಾಗ್ಯ ಅಕ್ಕಿ ಕಾಳಸಂತೆ ಪಾಲಾಗುತ್ತಿರುವುದರ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವನ್ನು ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಾಳಸಂತೆ ದಂಧೆಕೋರರನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
