ಹಿಂದೂಗಳ ಪವಿತ್ರ ಯಾತ್ರಾಸ್ಥಳ, ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ 2025ಕ್ಕೆ ನೋಂದಣಿ ಪ್ರಕ್ರಿಯೆ ಏಪ್ರಿಲ್ 14ರಿಂದ ಆರಂಭವಾಗಿದೆ. ನೋಂದಣಿಯಿಂದ ಹಿಡಿದು ಕಡ್ಡಾಯ ಆರೋಗ್ಯ ತಪಾಸಣೆಗಳು ಮತ್ತು ಏನು ಮಾಡಬೇಕು ಮತ್ತು ಏನು ಮಾಡಬಾರದು ಹೀಗೆ ದೈವಿಕ ಯಾತ್ರೆಯ ಭಾಗವಾಗಲು ಯೋಜಿಸುತ್ತಿರುವವರಿಗೆ ಸಂಪೂರ್ಣ ಮಾರ್ಗಸೂಚಿಗಳು ದೊರೆಯಲಿದೆ. ಯಾತ್ರಿಕರು ಶ್ರೀ ಅಮರನಾಥ ಜೀ ದೇವಾಲಯ ಮಂಡಳಿಯ (SASB) ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅಥವಾ ದೇಶಾದ್ಯಂತ ಗೊತ್ತುಪಡಿಸಿದ 540 ಬ್ಯಾಂಕ್ ಶಾಖೆಗಳ ಮೂಲಕ ಆಫ್ಲೈನ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.
ಆನ್ಲೈನ್ ನೋಂದಣಿ ಹಂತಗಳು:
1. ಅಧಿಕೃತ SASB ಪೋರ್ಟಲ್ – https://jksasb.nic.in ಗೆ ಭೇಟಿ ನೀಡಿ.
2. “ಯಾತ್ರಾ 2025 ನೋಂದಣಿ” ಮೇಲೆ ಕ್ಲಿಕ್ ಮಾಡಿ.
3. ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ
– ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ
– ಏಪ್ರಿಲ್ 15, 2025 ರ ನಂತರ ನೀಡಲಾದ ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC)
– ಸರ್ಕಾರ ಮಾನ್ಯ ಮಾಡಿರುವ ID ಪುರಾವೆ
4. ನೋಂದಣಿಯನ್ನು ಪೂರ್ಣಗೊಳಿಸಲು ಪಾವತಿ ಮಾಡಿ.
ಆಫ್ಲೈನ್ ನಲ್ಲಿ ನೋಂದಣಿ ಮಾಡುವವರ ಗಮನಕ್ಕೆ: ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು ಇತರ ಬ್ಯಾಂಕ್ಗಳ ನಿರ್ದಿಷ್ಟ ಶಾಖೆಗಳಲ್ಲಿ ಆಫ್ಲೈನ್ ನೋಂದಣಿಯನ್ನು ಮಾಡಲಾಗುತ್ತಿದೆ. ವೈಯಕ್ತಿಕವಾಗಿ ನೋಂದಾಯಿಸುವಾಗ ಮೂಲ ದಾಖಲೆಗಳು ಮತ್ತು CHC ಅನ್ನು ಕೊಂಡೊಯ್ಯಲು ಖಚಿತಪಡಿಸಿಕೊಳ್ಳಿ.
ಅಧಿಕೃತ ವೈದ್ಯರು ಅಥವಾ ಆರೋಗ್ಯ ಸಂಸ್ಥೆಗಳು ನೀಡುವ ಕಡ್ಡಾಯ ಆರೋಗ್ಯ ಪ್ರಮಾಣಪತ್ರ (CHC) ಇಲ್ಲದೆ ಯಾರೂ ಯಾತ್ರೆ ಮಾಡಲು ಅವಕಾಶ ಇರುವುದಿಲ್ಲ. ನೀವು ಎತ್ತರದ ಚಾರಣವನ್ನು ಮಾಡುವಾಗ ದೈಹಿಕವಾಗಿ ಸದೃಢರಾಗಿದ್ದೀರಿ ಎಂದು ವೈದ್ಯರ ಪ್ರಮಾಣಪತ್ರ ಖಚಿತಪಡಿಸುತ್ತದೆ. ಈ ಪ್ರಮಾಣ ಪತ್ರ ನೀಡುವಾಗ ಏಪ್ರಿಲ್ 15ರ ನಂತರ ತಪಾಸಣೆ ಮಾಡಿಸಿಕೊಂಡ ಪ್ರಮಾಣಪತ್ರ ಇದರಬೇಕು. 13 ವರ್ಷಕ್ಕಿಂತ ಕಡಿಮೆ ಇರುವ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಯಾತ್ರೆಗೆ ಅವಕಾಶವಿಲ್ಲ. ಬೇಸ್ ಕ್ಯಾಂಪ್ಗಳಲ್ಲಿ ಕಠಿಣ ತಪಾಸಣೆ ಇರುವುದರಿಂದ ನಿಮ್ಮ CHC ಮತ್ತು ಗುರುತಿನ ಚೀಟಿಯನ್ನು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಂಡೇ ಇರಬೇಕು.
ಸಮುದ್ರಮಟ್ಟದಿಂದ 12756 ಅಡಿ ಎತ್ತರದ ಗುಹೆಯಲ್ಲಿ ನೈಸರ್ಗಿಕವಾಗಿ ರಚನೆಯಾಗುವ ಹಿಮಲಿಂಗ ದರ್ಶನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಯಾತ್ರೆ ಜೂ.29ರಿಂದ ಆ.19ರವರೆಗೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದ ಅಮರನಾಥ ಗುಹಾ ದೇವಾಲಯಕ್ಕೆ ಹೋಗ ಬಯಸುವ ಭಕ್ತರು ಪಹಲ್ಗಾಮ್ ಮಾರ್ಗ (ಸಾಂಪ್ರದಾಯಿಕ ಮತ್ತು ಉದ್ದವಿದೆ) ಅಥವಾ ಬಾಲ್ಟಾಲ್ ಮಾರ್ಗ (ಕಡಿಮೆ ಆದರೆ ಕಡಿದಾದ ದಾರಿ) ಇಲ್ಲಿ ಹೋಗಬಹುದು.
ಇನ್ನು ಇಲ್ಲಿಗೆ ತೆರಳಲು ಹೆಲಿಕಾಪ್ಟರ್ ಸೇವೆಗಳು ಕೂಡ ಲಭ್ಯವಿದೆ ಮತ್ತು ಅಧಿಕೃತ ಸಂಸ್ಥೆಯ ಆನ್ಲೈನ್ನಲ್ಲಿ ಈ ಸೇವೆಯನ್ನು ಬುಕ್ ಮಾಡಬಹುದು. ಈ ಎರಡೂ ಮಾರ್ಗಗಳನ್ನು ಭಾರತೀಯ ಸೇನೆ ಮತ್ತು ವಿಪತ್ತು ಪ್ರತಿಕ್ರಿಯೆ ತಂಡಗಳು ಮೇಲ್ವಿಚಾರಣೆ ಮಾಡುತ್ತವೆ. ಸಂಭವಿಸಬಹುದಾದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಅಮರನಾಥ ಯಾತ್ರೆಯ ಮಾರ್ಗದಲ್ಲಿ ಎಲೆಕ್ಟ್ರಾನಿಕ್ ಕಣ್ಗಾವಲು, ಪ್ರವೇಶ ನಿಯಂತ್ರಣ ವ್ಯವಸ್ಥೆ ಸೇರಿದಂತೆ ಹೆಚ್ಚಿನ ಭದ್ರತಾ ಕ್ರಮಗಳನ್ನು ಮಾಡಲಾಗುತ್ತದೆ. ಉಗ್ರರ ದಾಳಿಯಿಂದ ಯಾತ್ರಿಕರನ್ನು ರಕ್ಷಿಸಲು ಅಮರನಾಥ ಯಾತ್ರೆ ಮಾರ್ಗದಲ್ಲಿ ಸಿಸಿಟೀವಿಗಳನ್ನು ಅಳವಡಿಸಲಾಗುತ್ತದೆ, ಸಾವಿರಾರು ಪೊಲೀಸರು, ಸಿಆರ್ಪಿಎಫ್ ಹಾಗೂ ಐಟಿಬಿಪಿ ಯೋಧರು, ಪ್ಯಾರ ಮಿಲಿಟರಿ ಪಡೆಗಳನ್ನು ಹೆಚ್ಚಿನ ಭದ್ರತೆಗೆ ನಿಯೋಜಿಸಲಾಗುತ್ತದೆ. ಯಾತ್ರೆಗೆ ಬರುವ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಲಾಗುತ್ತದೆ.
