ಅಮೃತ ಮಹಲ್ ಹೋರಿ: ದಾಖಲೆ ಬೆಲೆಗೆ ಹರಾಜು
ಚಿಕ್ಕಮಗಳೂರು: ಅಮೃತ ಮಹಲ್ ತಳಿಯ ಪೆಂಪಲಕ್ಕಿ-ಕಾಟಿ ಜೋಡಿ ಹೋರಿ ಕರುಗಳು ₹3.76 ಲಕ್ಷಕ್ಕೆ ಹರಾಜಾದವು.
ಅಮೃತ ಮಹಲ್ ಹೋರಿ ಕರುಗಳ ಹರಾಜು ಪ್ರಕ್ರಿಯೆ ಬೀರೂರಿನ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ಬುಧವಾರ ನಡೆಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ರೈತರು ಜಮಾಯಿಸಿದ್ದರು.
ಮೊದಲಿಗೆ ಹರಾಜಿಗೆ ಬರುವ ಪೂಜಾ ಕರುಗಳಿಗೆ ಇನ್ನಿಲ್ಲದ ಬೇಡಿಕೆ ಇರುತ್ತದೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕನ ಶಿಗ್ಗೇಹಟ್ಟಿ ಗ್ರಾಮದ ಶಂಕರಪ್ಪ ಅವರು ₹3,76,500 ತನಕ ಹರಾಜು ಕೂಗುವ ಮೂಲಕ ಹೋರಿ ಕರುಗಳನ್ನು ತಮ್ಮದಾಗಿಸಿಕೊಂಡರು.
ಇದೇ ಮೊದಲ ಬಾರಿಗೆ ಅಮೃತ ಮಹಲ್ ಹೋರಿ ಕರುಗಳು ಇಷ್ಟು ಮೊತ್ತಕ್ಕೆ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿದವು. ಒಟ್ಟು 172 ಹೋರಿ ಕರುಗಳು(86 ಜೋಡಿ) ಮತ್ತು 7 ಬೀಜದ ಹೋರಿಗಳ ಹರಾಜಿನ ಮೂಲಕ ₹1.11 ಕೋಟಿ ಮೊತ್ತ ಸಂಗ್ರಹವಾಗಿದ್ದು, ಇದು ಕೂಡ ದಾಖಲೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳಿದರು.
