ಬಳ್ಳಾರಿ, ಜನವರಿ 22: ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣದ ಬೆನ್ನಲ್ಲೇ ಮತ್ತೊಂದು ಗಂಭೀರ ಘಟನೆ ನಡೆದಿದೆ. ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಸೇರಿದ ಜಿ ಸ್ಕ್ವೇರ್ ಲೇಔಟ್ನಲ್ಲಿರುವ ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಮತ್ತಷ್ಟು ರಾಜಕೀಯ ತಿರುವು ಪಡೆಯುವ ಸಾಧ್ಯತೆಗಳಿವೆ.
ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಇಬ್ಬರ ಹೆಸರಿನಲ್ಲಿರುವ ಈ ಮಾಡೆಲ್ ಹೌಸ್ನ್ನು ಸುಮಾರು 13–14 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಒಟ್ಟು 109 ಎಕರೆ ವಿಸ್ತೀರ್ಣದ ಜಿ ಸ್ಕ್ವೇರ್ ಲೇಔಟ್ನಲ್ಲಿ, ಖರೀದಿದಾರರಿಗೆ ಪ್ರದರ್ಶನಕ್ಕಾಗಿ ಈ ಮಾಡೆಲ್ ಹೌಸ್ ನಿರ್ಮಿಸಲಾಗಿತ್ತು ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಬೆಂಬಲಿಗರೇ ಬೆಂಕಿ ಹಚ್ಚಿದ್ದಾರೆ: ಆರೋಪ
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ, “ಬ್ಯಾನರ್ ಗಲಾಟೆ ವೇಳೆ ಬೆಂಕಿ ಹಚ್ಚುವುದಾಗಿ ಹೇಳಿದ್ದರು. ಅದರ ಸಾಕ್ಷಿಯಾಗಿ ಇದೀಗ ನಮ್ಮ ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಿದ್ದಾರೆ. ಜನವರಿ 23ರ ಸಂಜೆ ಸುಮಾರು 6.30ರ ವೇಳೆಗೆ ಪೆಟ್ರೋಲ್ ಹಾಗೂ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಕೃತ್ಯದ ಹಿಂದೆ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರೇ ಇದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಘಟನಾ ಸ್ಥಳದಲ್ಲಿ ಕೆಲವರು ಬೆಂಕಿ ಹಚ್ಚಿದವರನ್ನು ಹಿಡಿಯಲು ಯತ್ನಿಸಿದ್ದು, ಮಾಹಿತಿ ಪಡೆದ ತಕ್ಷಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. “ಈ ಪ್ರಕರಣವನ್ನು ನಾವು ಸುಮ್ಮನೆ ಬಿಡುವುದಿಲ್ಲ. ಪೊಲೀಸ್ ಠಾಣೆಗೆ ದೂರು ನೀಡಲಾಗುವುದು” ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಜನಾರ್ದನ ರೆಡ್ಡಿ ಪ್ರತಿಕ್ರಿಯೆ
ಈ ಅಗ್ನಿ ಅವಘಡದ ಬಗ್ಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, “ಬ್ಯಾನರ್ ಗಲಾಟೆ ನಡೆದು ಇನ್ನೂ 15 ದಿನಗಳೂ ಆಗಿಲ್ಲ. ಅದಾಗಲೇ ಇಂತಹ ಘಟನೆ ನಡೆದಿದೆ. ಈ ಕುರಿತು ನಾನು ಬಳ್ಳಾರಿ ಎಸ್ಪಿ ಅವರೊಂದಿಗೆ ಮಾತನಾಡಿದ್ದೇನೆ” ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ, ರೆಡ್ಡಿ ನಿವಾಸದ ಬಳಿ ನಡೆದ ಬ್ಯಾನರ್ ಗಲಾಟೆಯ ಬೆನ್ನಲ್ಲೇ ಇದೀಗ ಅದೇ ಕುಟುಂಬಕ್ಕೆ ಸೇರಿದ ಮಾಡೆಲ್ ಹೌಸ್ಗೆ ಬೆಂಕಿ ಬಿದ್ದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಪ್ರಕರಣದ ತನಿಖೆ ಯಾವ ದಿಕ್ಕು ತಾಳಲಿದೆ ಎಂಬುದರತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ.