ಬೆಂಗಳೂರು: ರಾಜ್ಯದ ಜನತೆಗೆ ಸಾಲು ಸಾಲು ಬೆಲೆ ಏರಿಕೆ ನಡುವೆ ಮತ್ತೊಂದು ಶಾಕ್ ಎದುರಾಗಿದೆ. ರಾಜ್ಯ ಸರ್ಕಾರವು ರಾಜ್ಯಾದ್ಯಂತ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ಸಿದ್ಧತೆ ನಡೆಸಿದ್ದು, ಆಸ್ತಿ ಖರೀದಿ ಮತ್ತಷ್ಟು ದುಬಾರಿಯಾಲಿದೆ. ಏಪ್ರಿಲ್ ನಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕಳೆದ ವರ್ಷ ಮುದ್ರಾಂಕ ಶುಲ್ಕ ಏರಿಸಿದ್ದ ಸರ್ಕಾರ ಈಗ ಮಾರುಕಟ್ಟೆ ದರ ಆಧರಿಸಿ ಗೈಡೆನ್ಸ್ ವ್ಯಾಲ್ಯೂ ಹೆಚ್ಚಳಕ್ಕೆ ಮುಂದಾಗಿದೆ. ಸ್ಥಿರಾಸ್ತಿಗಳ ಮಾರುಕಟ್ಟೆ ದರದ ಆಧಾರದ ಮೇಲೆ ಮಾರ್ಗಸೂಚಿ ದರ ಪರಿಷ್ಕರಿಸಲು ಈಗಾಗಲೇ ಸಭೆ ನಡೆಸಲಾಗಿದ್ದು, ಏಪ್ರಿಲ್ ವೇಳೆಗೆ ಮಾರ್ಗಸೂಚಿ ದರವನ್ನು ಶೇ. 10ರಿಂದ ಶೇ. 15 ರಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ.
2025ರ ಆ. 31 ರಂದು ರಾಜ್ಯ ಸರ್ಕಾರ ಆಸ್ತಿ ನೋಂದಣಿ ಶುಲ್ಕವನ್ನು ಶೇಕಡ 1ರಿಂದ ಶೇಕಡ 2ಕ್ಕೆ ಹೆಚ್ಚಳ ಮಾಡಿದ್ದು ಇದರಿಂದ ಮುದ್ರಾಂಕ ಶುಲ್ಕ ಶೇಕಡ 5.6ರವರೆಗೆ, ಹೆಚ್ಚಾದ ನೋಂದಣಿ ಶುಲ್ಕ ಸೇರಿ ಆಸ್ತಿ ನೋಂದಣಿ ವೇಳೆ ಆಸ್ತಿ ಮೌಲ್ಯದ ಶೇಕಡ 7.6 ರಷ್ಟು ಶುಲ್ಕ ಭರಿಸಬೇಕಿದೆ. ಆಸ್ತಿ ಖರೀದಿಯ ವೇಳೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿ ಹೊರೆ ಕಡಿಮೆ ಮಾಡಿಕೊಳ್ಳಲು ಖರೀದಿದಾರರು ಮಾರುಕಟ್ಟೆ ಮೌಲ್ಯದ ಬದಲು ಮಾರ್ಗಸೂಚಿ ದರದ ಆಧಾರದ ಮೇಲೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಸುತ್ತಾರೆ. ಏಪ್ರಿಲ್ ನಿಂದ ಮಾರ್ಗಸೂಚಿ ದರ ಶೇಕಡ 15 ರಷ್ಟು ಹೆಚ್ಚಳವಾಗಲಿದ್ದು ಆಸ್ತಿ ಖರೀದಿದಾರರಿಗೆ ನೋಂದಣಿ ಮುದ್ರಾಂಕ ಶುಲ್ಕದ ಹೊರೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
