ಹಾಸನ: ಜಿಲ್ಲೆಯಲ್ಲಿ ಮತ್ತೆ ಕಾಡಾನೆ ದಾಳಿ ನಡೆದಿದ್ದು, ಒಬ್ಬ ರೈತ ದುರ್ಮರಣ ಹೊಂದಿರುವ ದುರ್ಘಟನೆ ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಸಂಭವಿಸಿದೆ.
ಇಂದು ಬೆಳ್ಳಂಬೆಳಗ್ಗೆ ತೋಟಕ್ಕೆ ತೆರಳಿದ್ದ ರೈತ ರಾಜಶೆಟ್ಟಿ ಅವರ ಮೇಲೆ ಒಂಟಿ ಕಾಡಾನೆ ದಾಳಿ ನಡೆಸಿದೆ. ದಾಳಿಯ ಪರಿಣಾಮವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದಾಳಿ ನಡೆಸಿದ ಕಾಡಾನೆ ಮೃತದೇಹದ ಮೇಲೆ ಕಾಫಿ ಗಿಡಗಳನ್ನು ಹಾಕಿ ಮುಚ್ಚಿದ ಘಟನೆ ಸ್ಥಳದಲ್ಲಿದ್ದವರಲ್ಲಿ ಆತಂಕ ಮೂಡಿಸಿದೆ. ಈ ಘಟನೆ ಗ್ರಾಮಸ್ಥರಲ್ಲಿ ಭೀತಿ ವಾತಾವರಣ ಸೃಷ್ಟಿಸಿದ್ದು, ಕಾಡಾನೆಗಳ ಹಾವಳಿ ಹೆಚ್ಚುತ್ತಿರುವುದರ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಘಟನೆ ತಿಳಿದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಡಾನೆಗಳ ನಿರಂತರ ದಾಳಿಯಿಂದ ಬೇಲೂರು ತಾಲೂಕಿನ ಗ್ರಾಮಗಳಲ್ಲಿ ಆತಂಕ ಹೆಚ್ಚುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
