ಹಾಸನ: ಕೊಡಗಿನ ತಲಕಾವೇರಿಯಿಂದ ತಮಿಳುನಾಡಿನ ಪಂಪುಹಾರ್ವರೆಗೆ ಸುಮಾರು 800 ಕಿ.ಮೀ. ಹರಿಯುವ ಕಾವೇರಿ ನದಿ ದಿನೇ ದಿನೇ ಮಲಿನಗೊಳ್ಳುತ್ತಿದ್ದು, ಇದರ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಸಮಿತಿ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಅವರು ಈಗಾಗಲೇ ಎರಡು ಬಾರಿ ಜಿಲ್ಲಾಧಿಕಾರಿ ಲತಾ ಕುಮಾರಿ ಅವರಿಗೆ ಮನವಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. ರಾಮನಾಥಪುರ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿದ್ದು, ಇಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಆದರೆ ನದಿ ದಂಡೆಯಲ್ಲಿ ಮಲ-ಮೂತ್ರ ವಿಸರ್ಜನೆ, ಸ್ನಾನ ಮಾಡಿದ ಬಟ್ಟೆ, ಪೂಜಾ ಸಾಮಗ್ರಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನದಿಯಲ್ಲಿ ಬಿಸಾಡುವುದರಿಂದ ನೀರು ಡಿ-ಗ್ರೇಡ್ ಆಗಿ ದುರ್ವಾಸನೆ ಉಂಟಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸಮಿತಿಯ ಪ್ರಮುಖ ಬೇಡಿಕೆಗಳು:
- ನದಿ ಸ್ವಚ್ಛತಾ ಅಭಿಯಾನಕ್ಕೆ ವಿಶೇಷ ಕ್ರಮ
- ಭಕ್ತರ ಸ್ನಾನಕ್ಕಾಗಿ ಬೇಲಿ ಹಾಕಿ ಪ್ರತ್ಯೇಕ ಸ್ನಾನಘಟ್ಟ ವ್ಯವಸ್ಥೆ
- ನದಿ ದಂಡೆಯಲ್ಲಿ ಶೌಚಾಲಯ ನಿರ್ಮಾಣ
- ಪ್ಲಾಸ್ಟಿಕ್, ಸೋಪು, ಬಟ್ಟೆ ತೊಳೆಯುವಿಕೆ ನಿಷೇಧ
- ಪ್ರಾಣಿಗಳ ತ್ಯಾಜ್ಯ ವಿಸರ್ಜನೆಗೆ ತಡೆ
- ಪ್ರತಿ ತಿಂಗಳು ಪಂಚಾಯಿತಿಯಿಂದ ಸ್ವಚ್ಛತಾ ಅಭಿಯಾನ
- ಕರಪತ್ರಗಳ ಮೂಲಕ ಜಾಗೃತಿ ಮೂಡಿಸುವುದು
- ನದಿ ದಂಡೆಗೆ ಕಬ್ಬಿಣದ ಗೇಟ್ ಹಾಗೂ ಸಿಬ್ಬಂದಿ ನಿಯೋಜನೆ

ಕೆಲವು ಹೊರಗಡೆಯ ಪುರೋಹಿತರು ಹಾಗೂ ಭಕ್ತರು ಹೋಮ-ಹವನಗಳನ್ನು ನದಿ ತೀರದಲ್ಲೇ ನಡೆಸಿ ತ್ಯಾಜ್ಯಗಳನ್ನು ನೀರಿನಲ್ಲಿ ಬಿಡುವುದು, ದೇವರ ಮೆರವಣಿಗೆ ವೇಳೆ ತಮಟೆ-ಡೋಲುಗಳ ಶಬ್ದ ಮಾಲಿನ್ಯ ಉಂಟುಮಾಡುವುದು ಸ್ಥಳೀಯರಿಗೆ ತೊಂದರೆ ಉಂಟುಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಾಶಿ, ಶೃಂಗೇರಿ ಮೊದಲಾದ ಕ್ಷೇತ್ರಗಳಲ್ಲಿ ಅನುಸರಿಸಿದ ಮಾದರಿಯನ್ನು ಇಲ್ಲಿ ಜಾರಿಗೆ ತರುವಂತೆ ಸಮಿತಿ ಒತ್ತಾಯಿಸಿದೆ. ರಾಮನಾಥಪುರದ ಪವಿತ್ರತೆ ಹಾಗೂ ಕಾವೇರಿ ನದಿಯ ಮಹತ್ವವನ್ನು ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಮಿತಿ ಸದಸ್ಯರಾದ ರಘು, ಕಾಳಬೋಯಿ, ಶಿವಪ್ಪ, ಸಿದ್ದರಾಜು, ಕೇಶವ ಸೇರಿದಂತೆ ಇತರರು ಮನವಿ ಮಾಡಿದ್ದಾರೆ.
ವರದಿ: ಕುಮಾರ ಸ್ವಾಮಿ
