ಸುಪ್ರೀಂ ಕೋರ್ಟ್
ನವದೆಹಲಿ, ಮಾ.14: ಜಿಲ್ಲಾ ನ್ಯಾಯಾಧೀಶರ ನೇಮಕಾತಿ, ಪುನರ್ ನೇಮಕಾತಿ ಹಾಗೂ ಸೇವಾ ಜೇಷ್ಟತೆ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಳೆದ ವರ್ಷ ಸಂವಿಧಾನ ಪೀಠವು ‘ರಜನೀಶ್ ಕೆ.ವಿ. ವಿರುದ್ಧ ಕೆ. ದೀಪಾ’ ಪ್ರಕರಣದಲ್ಲಿ ನೀಡಿದ ತೀರ್ಪಿನ ಅನುಸರಣೆಯಾಗಿ ಈ ನಿರ್ದೇಶನಗಳನ್ನು ನೀಡಲಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯಾ ಬಾಗ್ಚಿ ಹಾಗೂ ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಹಿಂತಿರುಗಿಸಿದ ನೇಮಕಾತಿಗಳು ಕಾನೂನುಬಾಹಿರ
ಹಿಂದೆ ಕೆಲವು ಸಿವಿಲ್ ನ್ಯಾಯಾಧೀಶರು ನೇರ ನೇಮಕಾತಿ ಮೂಲಕ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಆದರೆ ‘ಧೀರಜ್ ಮೋರ್ ವಿರುದ್ಧ ದೆಹಲಿ ಹೈಕೋರ್ಟ್’ (2020) ತೀರ್ಪಿನ ಬಳಿಕ, ಜಿಲ್ಲಾ ನ್ಯಾಯಾಧೀಶರ ನೇರ ನೇಮಕಾತಿಗೆ ಕೇವಲ ವೃತ್ತಿಪರ ವಕೀಲರು ಮಾತ್ರ ಅರ್ಹರು ಎಂಬ ವ್ಯಾಖ್ಯಾನದ ಆಧಾರದಲ್ಲಿ, ಕೆಲ ನ್ಯಾಯಿಕ ಅಧಿಕಾರಿಗಳನ್ನು ಮತ್ತೆ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಹಿಂತಿರುಗಿಸಲಾಗಿತ್ತು.
ಆದರೆ ನಂತರ ‘ರಜನೀಶ್’ ಪ್ರಕರಣದಲ್ಲಿ ಆ ತೀರ್ಪು ರದ್ದುಗೊಂಡ ಹಿನ್ನೆಲೆಯಲ್ಲಿ, ಇಂತಹ ಹಿಂತಿರುಗಿಸುವ ಕ್ರಮಗಳು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಮೂಲ ನೇಮಕಾತಿ ದಿನಾಂಕದಿಂದಲೇ ಸೇವೆ ಪರಿಗಣನೆ
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಮೊದಲು ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡು ಬಳಿಕ ಹಿಂತಿರುಗಿಸಲ್ಪಟ್ಟ ಎಲ್ಲ ನ್ಯಾಯಿಕ ಅಧಿಕಾರಿಗಳ ಸೇವೆಯನ್ನು ಅವರ ಮೂಲ ನೇಮಕಾತಿ ದಿನಾಂಕದಿಂದಲೇ ಜಿಲ್ಲಾ ನ್ಯಾಯಾಧೀಶರ ಸೇವೆಯಾಗಿ ಪರಿಗಣಿಸಬೇಕು. ಅವರಿಗೆ ಸಂಬಂಧಿತ ಸೇವಾ ಜೇಷ್ಟತೆ ಹಾಗೂ ಕಲ್ಪಿತ ವೇತನ ಲಾಭಗಳು ದೊರೆಯಲಿವೆ. ಆದರೆ ಬಾಕಿ ವೇತನ (arrears) ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ನೇಮಕಾತಿ ಆಗದವರಿಗೂ ಅವಕಾಶ
ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಅರ್ಹತೆ ಕುರಿತ ವಿವಾದಗಳಿಂದ ಅಂತಿಮ ನೇಮಕಾತಿ ಆದೇಶ ನೀಡದಿದ್ದ ಅಧಿಕಾರಿಗಳಿಗೆ ತಕ್ಷಣವೇ ನೇಮಕಾತಿ ನೀಡುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್ಗಳಿಗೆ ನಿರ್ದೇಶಿಸಿದೆ.
ಈ ನೇಮಕಾತಿ 12-10-2025ರಿಂದ ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದು ಪೀಠ ಹೇಳಿದೆ. ಇದು ಸಂವಿಧಾನ ಪೀಠದ ತೀರ್ಪು ನೀಡಿದ ಬಳಿಕದ ದಿನಾಂಕವಾಗಿರುವುದಾಗಿ ತಿಳಿಸಿದೆ.
ಜೇಷ್ಟತೆ ನಿರ್ಧಾರಕ್ಕೆ ಮೂರು ನ್ಯಾಯಮೂರ್ತಿಗಳ ಸಮಿತಿ
ಈ ವರ್ಗದ ಅಧಿಕಾರಿಗಳ ಪರಸ್ಪರ ಸೇವಾ ಜೇಷ್ಟತೆ ನಿರ್ಧಾರವು ಸಂಕೀರ್ಣ ವಿಷಯವಾಗಿರುವುದರಿಂದ, ಪ್ರತಿ ಹೈಕೋರ್ಟ್ ಕೂಡ ಮೂರು ನ್ಯಾಯಮೂರ್ತಿಗಳ ಸಮಿತಿ ರಚಿಸಿ, ಸಂಬಂಧಿತ ಎಲ್ಲಾ ಅಧಿಕಾರಿಗಳ ಮಾತು ಕೇಳಿ ಶಿಫಾರಸ್ಸು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಈ ಶಿಫಾರಸ್ಸುಗಳನ್ನು ಹೈಕೋರ್ಟ್ನ ಪೂರ್ಣ ಪೀಠ ಅಂತಿಮವಾಗಿ ಪರಿಗಣಿಸಬೇಕು. ಈ ಪ್ರಕ್ರಿಯೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಅಪೂರ್ಣವಾಗಿರುವವರಿಗೆ ಹೊಸ ಅವಕಾಶ
ಇನ್ನೂ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿಲ್ಲದ ಅಧಿಕಾರಿಗಳ ವಿಚಾರದಲ್ಲಿ, ಸಂಬಂಧಿತ ಹೈಕೋರ್ಟ್ಗಳು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಅರ್ಹರನ್ನು ನೇಮಕ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಮೇರುಪಟ್ಟಿಯಲ್ಲಿ ಸ್ಥಾನ ಪಡೆದವರಿಗೆ ಮಾತ್ರ ಮುಂದಿನ ದಿನಾಂಕದಿಂದ ಹಿರಿಯತೆ ದೊರೆಯುತ್ತದೆ. ಈಗಾಗಲೇ ಸ್ಥಿರವಾಗಿರುವ ಹಿಂದಿನ ಜೇಷ್ಟತೆ ವ್ಯವಸ್ಥೆಯನ್ನು ಮರುಪರಿಶೀಲಿಸಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಯೋಮಿತಿ ಸಡಿಲಿಕೆ
ಇನ್ನೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿರುವ ಅಧಿಕಾರಿಗಳಿಗೆ, ಅವರು ಹಿಂದೆ ಅರ್ಹರಾಗಿದ್ದ ಕಾರಣದಿಂದ ಯಾವುದೇ “ಕಲ್ಪಿತ ಹಕ್ಕು” ಸೃಷ್ಟಿಯಾಗುವುದಿಲ್ಲ. ಆದರೆ ವಯೋಮಿತಿ ಮೀರಿದ್ದರೆ ಅವರಿಗೆ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ಕೋರ್ಟ್ ತಿಳಿಸಿದೆ.
ಹೈಕೋರ್ಟ್ಗಳು ಹೊಸ ಆಯ್ಕೆ ಪ್ರಕ್ರಿಯೆ ಆರಂಭಿಸಿ, ಅವರಿಗೆ ಭಾಗವಹಿಸಲು ಅವಕಾಶ ನೀಡಬೇಕು. ಅವರು ಆಯ್ಕೆಯಾಗಿದರೆ ಮಾತ್ರ ನೇಮಕಾತಿಯ ಹಕ್ಕು ದೊರೆಯುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಬಾಕಿ ಅರ್ಜಿಗಳಿಗೆ ತೆರೆ
ಸಂವಿಧಾನ ಪೀಠದ ತೀರ್ಪಿನ ಬೆಳಕಿನಲ್ಲಿ ಇಂತಹ ಎಲ್ಲ ಸವಾಲುಗಳು ಫಲಕಾರಿಯಾಗುವುದಿಲ್ಲ. ಹೀಗಾಗಿ ಈ ಸಂಬಂಧ ಬಾಕಿ ಇರುವ ಅರ್ಜಿಗಳು ಮುಂದುವರಿಯಲು ಅರ್ಹವಿಲ್ಲ ಎಂದು ನ್ಯಾಯಪೀಠ ಹೇಳಿದೆ.
