ಅರಸೀಕೆರೆ, ಏ.4: ಹಾಸನ ಜಿಲ್ಲೆಯ ಅರಸೀಕೆರೆ ನಗರದಲ್ಲಿ ಜೇನುಕಲ್ ಸಿದ್ದೇಶ್ವರ ಸ್ವಾಮಿ ಜಾತ್ರೆಯಿಂದ ವಾಪಸ್ ಆಗುತ್ತಿದ್ದ ದಂಪತಿ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದ್ದು, ಘಟನೆ ಬಳಿಕ ಕೆಲಕಾಲ ಉದ್ವಿಗ್ನತೆ ಉಂಟಾಯಿತು.
ತಿಪಟೂರು ಮೂಲದ ದಂಪತಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಎಪಿಎಂಸಿ ಎದುರು ಇನ್ನೊಂದು ಬೈಕ್ನಲ್ಲಿ ಬಂದಿದ್ದ ಕೆಲ ಯುವಕರೊಂದಿಗೆ ವೇಗದ ವಿಚಾರವಾಗಿ ಮಾತಿನ ಚಕಮಕಿ ನಡೆದಿದ್ದು, ನಂತರ ಅದು ಗಲಾಟೆಗೆ ತಿರುಗಿದಂತೆ ತಿಳಿದುಬಂದಿದೆ. ಘಟನೆಯಲ್ಲಿ ಅರಸೀಕೆರೆ ನಗರಸಭೆಯ ಮಾಜಿ ಅಧ್ಯಕ್ಷರ ಪುತ್ರನ ಮೇಲೂ ಹಲ್ಲೆ ಆರೋಪ ಕೇಳಿಬಂದಿದೆ.
ಘಟನೆಯನ್ನು ಖಂಡಿಸಿ ಕೆಲವು ಹಿಂದೂಪರ ಸಂಘಟನೆಗಳು ಅರಸೀಕೆರೆಯಲ್ಲಿ ಪ್ರತಿಭಟನೆ ನಡೆಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿವೆ. ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿ ಶಾಂತಿ ಭಂಗ ಉಂಟುಮಾಡಿದ ಹಿನ್ನೆಲೆಯಲ್ಲಿ ಅರಸೀಕೆರೆ ಪೊಲೀಸರು ಸುವೋ ಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ದಂಪತಿ ಹಾಗೂ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇತರರು ಯಾವುದೇ ಪ್ರತ್ಯೇಕ ದೂರು ನೀಡಿಲ್ಲ. ಆದರೂ ಘಟನೆಯ ಗಂಭೀರತೆಯನ್ನು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
